ನವದೆಹಲಿ, ಸೆಪ್ಟೆಂಬರ್ 8: ಭಾರತದ ಚಂದ್ರಯಾನ-3 ಯೋಜನೆಯ ಯಶಸ್ಸಿಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ವಿಜ್ಞಾನಿಗಳನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಭಿನಂದಿಸಿದರು. ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಭಾರತಕ್ಕೆ ಬಂದಿರುವ ಅವರು ಶುಕ್ರವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಆ ಬಳಿಕ ಭಾರತ, ಅಮೆರಿಕದಿಂದ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಉಭಯ ನಾಯಕರು ನಡೆಸಿರುವ ಮಾತುಕತೆಯ ವಿವರ ನೀಡಲಾಗಿದೆ.
ಉಭಯ ದೇಶಗಳ ನಡುವೆ ರಾಜಕೀಯ ಪಾಲುದಾರಿಕೆಗಾಗಿ ತಾಂತ್ರಿಕ ಸಹಕಾರದ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಜತೆಗೆ ಚೀನಾದ ಬಗ್ಗೆಯೂ ಮಾತುಕತೆ ನಡೆದಿದೆ. ಕ್ವಾಡ್ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವಂತೆ ಬೈಡನ್ ಅವರನ್ನು ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ.
ಎಂಕ್ಯು9 ರೀಪರ್ ಡ್ರೋನ್ ಮತ್ತು ಜೆಟ್ ಎಂಜಿನ್ ಬಗ್ಗೆ ಉಭಯ ದೇಶಗಳ ನಡುವಿನ ಮಾತುಕತೆಗಳು ಪ್ರಗತಿಯಲ್ಲಿವೆ. ಪ್ರಧಾನಿ ಮೋದಿ ಮತ್ತು ಬೈಡನ್ ದ್ವಿಪಕ್ಷೀಯ ಮಾತುಕತೆಯಲ್ಲಿ, ಕ್ವಾಡ್ನಲ್ಲಿ ಎರಡೂ ದೇಶಗಳ ಸಕ್ರಿಯ ಪಾತ್ರದ ಬಗ್ಗೆಯೂ ಚರ್ಚಿಸಲಾಗಿದೆ. ಜತೆಗೆ ಜಿ 20 ಅಧ್ಯಕ್ಷ ಸ್ಥಾನಕ್ಕಾಗಿ ಭಾರತವನ್ನು ಬೈಡನ್ ಶ್ಲಾಘಿಸಿದ್ದಾರೆ.
ಉಭಯ ರಾಷ್ಟ್ರಗಳ ಮುಖ್ಯಸ್ಥರ ನಡುವಿನ ದ್ವಿಪಕ್ಷೀಯ ಮಾತುಕತೆ ಒಟ್ಟು ನಲವತ್ತೈದು ನಿಮಿಷಗಳ ಕಾಲ ನಡೆದಿದೆ. ದ್ವಿಪಕ್ಷೀಯ ಮಾತುಕತೆ ಮುಗಿದ ನಂತರ, ಅಮೆರಿಕದ ಅಧ್ಯಕ್ಷರು ಐಟಿಸಿ ಮೌರ್ಯ ಹೋಟೆಲ್ಗೆ ತೆರಳಿದ್ದು, ವಿಶ್ರಾಂತಿ ಪಡೆಯಲಿದ್ದಾರೆ. ದೆಹಲಿ ತಲುಪಿದ ನಂತರ ಬೈಡನ್ ಅವರು ನೇರವಾಗಿ ಪ್ರಧಾನಿ ಮೋದಿ ನಿವಾಸಕ್ಕೆ ತಲುಪಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.