ಮುಂಬೈ: ಮುಂಬರುವ ಏಕದಿನ ವಿಶ್ವಕಪ್ ಮೆಗಾ ಕೂಟಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂಪೈರ್ ಗಳು ಮತ್ತು ರೆಫ್ರಿಗಳ ತಂಡವನ್ನು ಹೆಸರಿಸಿದೆ. ಒಟ್ಟು 20 ಮ್ಯಾಚ್ ಅಫೀಶಯಲ್ ಗಳನ್ನು ಹೆಸರಿಸಲಾಗಿದ್ದು, ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ.
16 ಮಂದಿ ಅಂಪೈರ್ ಗಳು ಮತ್ತು ನಾಲ್ಕು ಮ್ಯಾಚ್ ರೆಫ್ರಿಗಳಿದ್ದಾರೆ. ಅಂಪೈರ್ ಗಳ ಪಟ್ಟಿಯಲ್ಲಿ ಭಾರತದ ನಿತಿನ್ ಮೆನನ್ ಮತ್ತು ರೆಫ್ರಿಗಳ ಪಟ್ಟಿಯಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ಇದ್ದಾರೆ.
12 ಮಂದಿ ಅಲೈಟ್ ಪ್ಯಾನೆಲ್ ಅಂಪೈರ್ ಗಳು ವಿಶ್ವಕಪ್ ಗೆ ಕಾರ್ಯ ನಿರ್ವಹಿಸಲಿದ್ದಾರೆ. ಅವರೆಂದರೆ ಕ್ರಿಸ್ಟೋಫರ್ ಗ್ಯಾಫ್ನಿ (ನ್ಯೂಜಿಲ್ಯಾಂಡ್), ಕುಮಾರ್ ಧರ್ಮಸೇನಾ (ಶ್ರೀಲಂಕಾ), ಮರೈಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ), ಮೈಕೆಲ್ ಗಾಫ್ (ಇಂಗ್ಲೆಂಡ್), ನಿತಿನ್ ಮೆನನ್ (ಭಾರತ), ಪಾಲ್ ರೀಫೆಲ್ (ಆಸ್ಟ್ರೇಲಿಯಾ), ರಿಚರ್ಡ್ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್), ರಿಚರ್ಡ್ ಕೆಟಲ್‌ಬರೋ ( ಇಂಗ್ಲೆಂಡ್), ರಾಡ್ನಿ ಟಕರ್ (ಆಸ್ಟ್ರೇಲಿಯಾ), ಜೋಯಲ್ ವಿಲ್ಸನ್ (ವೆಸ್ಟ್ ಇಂಡೀಸ್), ಎಹ್ಸನ್ ರಜಾ (ಪಾಕಿಸ್ತಾನ), ಮತ್ತು ಆಡ್ರಿಯನ್ ಹೋಲ್ಡ್ಸ್ಟಾಕ್ (ದಕ್ಷಿಣ ಆಫ್ರಿಕಾ).
ಉಳಿದ ನಾಲ್ವರು ಐಸಿಸಿ ಎಮರ್ಜಿಂಗ್ ಅಂಪೈರ್ ಪ್ಯಾನೆಲ್ ಗೆ ಸೇರಿದವರು. ಅವರಲ್ಲಿ ಶರ್ಫುದ್ದೌಲಾ ಇಬ್ನೆ ಶಾಹಿದ್ (ಬಾಂಗ್ಲಾದೇಶ), ಪಾಲ್ ವಿಲ್ಸನ್ (ಆಸ್ಟ್ರೇಲಿಯಾ), ಅಲೆಕ್ಸ್ ವಾರ್ಫ್ (ಇಂಗ್ಲೆಂಡ್) ಮತ್ತು ಕ್ರಿಸ್ ಬ್ರೌನ್ (ನ್ಯೂಜಿಲ್ಯಾಂಡ್) ಸೇರಿದ್ದಾರೆ.
2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದ ನಾಲ್ವರಲ್ಲಿ ಮೂವರು ಈ ಬಾರಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಅವರೆಂದರೆ ಕುಮಾರ ಧರ್ಮಸೇನಾ, ಮರೈಸ್ ಎರಾಸ್ಮಸ್ ಮತ್ತು ರಾಡ್ನಿ ಟಕರ್. ಮತ್ತೋರ್ವ ಅಂಪೈರ್ ಅಲೀಂ ದಾರ್ ಅವರು ಐಸಿಸಿ ಎಲೈಟ್ ಪ್ಯಾನೆಲ್ ನಿಂದ ಕಳೆದ ಮಾರ್ಚ್ ನಿಂದ ಹೊರ ನಡೆದಿದ್ದಾರೆ.
ನಾಲ್ವರು ರೆಫ್ರಿಗಳು
ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳಾದ ಜೆಫ್ ಕ್ರೋವ್ (ನ್ಯೂಜಿಲ್ಯಾಂಡ್), ಆಂಡಿ ಪೈಕ್ರಾಫ್ಟ್ (ಜಿಂಬಾಬ್ವೆ), ರಿಚಿ ರಿಚರ್ಡ್ಸನ್ (ವೆಸ್ಟ್ ಇಂಡೀಸ್) ಮತ್ತು ಜಾವಗಲ್ ಶ್ರೀನಾಥ್ (ಭಾರತ) ಅವರು ಏಕದಿನ ವಿಶ್ವಕಪ್ ನಲ್ಲಿ ರೆಫ್ರಿಗಳಾಗಿ ಕೆಲಸ ಮಾಡಲಿದ್ದಾರೆ.
ಅಕ್ಟೋಬರ್ 5 ರಂದು ನಡೆಯಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯಾವಳಿಯ ಆರಂಭಿಕ ಪಂದ್ಯಕ್ಕೆ ಮ್ಯಾಚ್ ಅಫೀಶಿಯಲ್ ಗಳನ್ನು ಹೆಸರಿಸಲಾಗಿದೆ. ನಿತಿನ್ ಮೆನನ್ ಮತ್ತು ಧರ್ಮಸೇನಾ ಆನ್ ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಪಾಲ್ ವಿಲ್ಸನ್ ಟಿವಿ ಅಂಪೈರ್ ಆಗಿದ್ದರೆ, ಶರ್ಫುದ್ದೌಲಾ ನಾಲ್ಕನೇ ಅಂಪೈರ್ ಆಗಲಿದ್ದಾರೆ. ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಿರುತ್ತಾರೆ.