ಮುಂಬೈ: ಮಂಗಳವಾರ ವಾಂಖೇಡೆಯಲ್ಲಿ ನಡೆದ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶದ ಮೇಲೆ ಸವಾರಿ ಮಾಡಿ 149 ರನ್ನುಗಳ ಜಯಭೇರಿ ಮೊಳಗಿಸಿತು.
ಕ್ವಿಂಟನ್ ಡಿ ಕಾಕ್ ಅವರ 3ನೇ ಶತಕ ಮತ್ತು ಹೆನ್ರಿಕ್ ಕ್ಲಾಸೆನ್ ಸಿಡಿಲಬ್ಬರ ಬ್ಯಾಟಿಂಗ್ ಸಾಹಸದಿಂದ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 382 ರನ್ ಪೇರಿಸಿದರೆ, ಬಾಂಗ್ಲಾದೇಶ 46.4 ಓವರ್‌ಗಳಲ್ಲಿ 233 ರನ್ ಮಾಡಿ ಶರಣಾಯಿತು.
ಇದು 5 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಸಾಧಿಸಿದ 4ನೇ ಗೆಲುವು. ಬಾಂಗ್ಲಾ ಇಷ್ಟೇ ಪಂದ್ಯಗಳಲ್ಲಿ 4ನೇ ಸೋಲನುಭವಿಸಿತು. ಚೇಸಿಂಗ್ ವೇಳೆ ಬ್ಯಾಟಿಂಗ್ ಹೋರಾಟ ತೋರಿದ್ದು ಮಹಮದುಲ್ಲ ಮಾತ್ರ. ಅವರು ಅಮೋಘ ಶತಕವೊಂದನ್ನು ಬಾರಿಸಿ ಸೋಲಿನಲ್ಲೂ ಗೌರವ ತಂದಿತ್ತರು. ಎಸೆತಕ್ಕೊಂದರಂತೆ 111 ರನ್ ಬಾರಿಸಿ ಮಿಂಚಿದರು (11 ಬೌಂಡರಿ, 4 ಸಿಕ್ಸರ್).
ದಕ್ಷಿಣ ಆಫ್ರಿಕಾ ಮತ್ತೂಮ್ಮೆ 350 ರನ್ ಗಡಿ ದಾಟಿ ಮುನ್ನುಗ್ಗಿತು.
ನಾಯಕ ಟೆಂಬ ಬವುಮ ಗೈರಲ್ಲಿ ಕಣಕ್ಕಿಳಿದ ದಕ್ಷಿಣ ಆಫ್ರಿಕಾವನ್ನು ಐಡನ್ ಮಾರ್ಕ್‌ರಮ್ ಮುನ್ನಡೆಸಿದರು. ಆದರೆ ಹರಿಣಗಳ ಆರಂಭ ತೀರಾ ಕಳಪೆ ಆಗಿತ್ತು. ರೀಝ ಹೆಂಡ್ರಿಕ್ಸ್ (12) ಮತ್ತು ರಸ್ಸಿ ವಾನ್ ಡರ್ ಡುಸೆನ್ (1) ಬೇಗನೇ ಪೆವಿಲಿಯನ್ ಸೇರಿದರು. ಕ್ವಿಂಟನ್ ಡಿ ಕಾಕ್, ಐಡನ್ ಮಾರ್ಕ್‌ರಮ್, ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಸಿಡಿದು ನಿಲ್ಲುವುದರೊಂದಿಗೆ ದಕ್ಷಿಣ ಆಫ್ರಿಕಾ ಭರ್ಜರಿ ಓಟ ಬೆಳೆಸಿತು.
ಉಸ್ತುವಾರಿ ನಾಯಕ ಮಾರ್ಕ್‌ರಮ್ ಕೂಡ ಸೊಗಸಾದ ಆಟವಾಡಿ 69 ಎಸೆತಗಳಿಂದ 60 ರನ್ ಹೊಡೆದರು (7 ಬೌಂಡರಿ). ಡಿ ಕಾಕ್-ಮಾರ್ಕ್ ರಮ್ ಜತೆಯಾಟದಲ್ಲಿ 3ನೇ ವಿಕೆಟಿಗೆ 131 ರನ್ ಹರಿದು ಬಂತು.ಹೆನ್ರಿಕ್ ಕ್ಲಾಸೆನ್ ಮತ್ತೂಮ್ಮೆ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿಗೆ ಭೀತಿಯೊಡ್ಡಿದರು. ಸತತ 2ನೇ ಶತಕದ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. ಇಂಗ್ಲೆಂಡ್ ವಿರುದ್ಧ ಇದೇ ಅಂಗಳದಲ್ಲಿ 109 ರನ್ ಬಾರಿಸಿದ್ದ ಕ್ಲಾಸೆನ್, ಈ ಮುಖಾಮುಖೀಯಲ್ಲಿ 49 ಎಸೆತಗಳಿಂದ 90 ರನ್ ಬಾರಿಸಿದರು. ಸಿಡಿಸಿದ್ದು 2 ಬೌಂಡರಿ ಹಾಗೂ 8 ಸಿಕ್ಸರ್. ಕೊನೆಯಲ್ಲಿ ಡೇವಿಡ್ ಮಿಲ್ಲರ್ ಕೂಡ ಸ್ಫೋಟಿಸಿದರು. ಕೇವಲ 15 ಎಸೆತಗಳಿಂದ 34 ರನ್ ಬಂತು.
ಬಾಂಗ್ಲಾ ದೇಶದ ಮಧ್ಯಮ ಕ್ರಮಾಂಕದ ಆಟಗಾರ ಮಹಮ್ಮದುಲ್ಲಾ ಶತಕ ಸಿಡಿಸಿ ಸಂಭ್ರಮಿಸಿದರು. 111 ರನ್ ಗಳಿಸಿ ಔಟಾದರು.