ಬೆಂಗಳೂರು, ಅ. 4 : ರಾಜ್ಯದಲ್ಲಿ ಈ ಬಾರಿ ರೈತನ ಸಂಕಷ್ಟ ಹೇಳತೀರದಾಗಿದೆ. ಮುಂಗಾರು ಮಳೆ ಇಲ್ಲದೇ ಬರಗಾಲ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಬರ ಸಮೀಕ್ಷೆ ಗಾಗಿ ನಾಳೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ಮೂರು ತಂಡ ಭೇಟಿ ನೀಡಲಿದೆ. ನಾಳೆಯಿಂದ ಅ.9ರವರೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಚಿತ್ರದುರ್ಗ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಒಟ್ಟು 12 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಆದರೆ ಪ್ರವಾಸಕ್ಕೂ ಮುನ್ನ ನಾಳೆ ಕೇಂದ್ರ ತಂಡದ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.
ಈಗಾಗಲೇ 195 ತಾಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, ಕೇಂದ್ರದ ಬಳಿ 6 ಸಾವಿರ ಕೋಟಿ ರೂ. ಪರಿಹಾರವನ್ನು ಕೇಳಿದೆ.
161 ತಾಲೂಕುಗಳಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದೆ. 34 ತಾಲೂಕುಗಳಲ್ಲಿ ಸಾಧಾರಣ ಬರದ ಪರಿಸ್ಥಿತಿ. ಒಟ್ಟು 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಉಳಿದ 40 ತಾಲೂಕುಗಳಲ್ಲಿ ಮಳೆ ಕೊರತೆ ಇದ್ದರೂ ಕೂಡ ತೇವಾಂಶ ಕೊರತೆ ಕಂಡು ಬರುತ್ತಿಲ್ಲ. ಮಾರ್ಗಸೂಚಿಗಳ ಪ್ರಕಾರ, ಮಧ್ಯಮ ಬರಕ್ಕೆ ಕೇಂದ್ರ ಸರ್ಕಾರ ಪರಿಹಾರ ಕೊಡಬಹುದು ಅಥವಾ ಇಲ್ಲದೇ ಇರಬಹುದು. ಬರ ಘೋಷಣೆ ಮನವಿಗೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದೇವೆ. ಎಲ್ಲ ಬರ ಪೀಡಿತ ತಾಲೂಕುಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲು ಸೂಚನೆ ನೀಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದರು.
ಬೆಳೆ ಬೆಳೆದು ಬದುಕು ಸಾಗಿಸಬೇಕಿದ್ದ ಅನ್ನದಾತ ಬರಡು ಭೂಮಿಯಲ್ಲಿ ಆಕಾಶ ನೋಡುತ್ತಾ ಕುಳಿತುಕೊಳ್ಳುವ ಭೀಕರ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆ ಜಿಲ್ಲೆಯಲ್ಲೂ ಬರದ ಆರ್ತನಾದ ಕೇಳಿಬರುತ್ತಿದೆ. ಸಾಲಸೋಲ ಮಾಡಿ ಬೆವರು ಸುರಿಸಿ ಬಿತ್ತನೆ ಮಾಡಿದ್ದ ಬೆಳೆಯನ್ನ ರೈತರೇ ತಮ್ಮ ಕೈಯ್ಯಾರೆ ಕಿತ್ತು ಹಾಕುತ್ತಿದ್ದಾರೆ.