ಮಂಗಳೂರು, ಅ. 4 : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ಸಮಗ್ರ ಸರಕು ಟರ್ಮಿನಲ್ (ಐಸಿಟಿ) ಕಾರ್ಯಾರಂಭ ಮಾಡಿದ ಬಳಿಕ ಸ್ಥಳೀಯ ಸಾಗರೋತ್ಪನ್ನ ರಫ್ತುದಾರರು ಈ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾಗರೋತ್ಪನ್ನಗಳ ವ್ಯಾಪಾರೋದ್ಯಮಿಯೊಬ್ಬರು ಜೀವಂತ ಏಡಿಗಳನ್ನು ವಿಮಾನದ ಮೂಲಕ ರವಾನೆ ಮಾಡುತ್ತಿದ್ದಾರೆ.
‘ಸಾಗರೋತ್ತರ ಗ್ರಾಹಕರಿಗೆ ಇಲ್ಲಿನ ಸಾಗರೋತ್ಪನ್ನಗಳನ್ನು ಸಾಗಿಸಲು ಐಸಿಟಿ ವರದಾನವಾಗಿದೆ. ವಿಶೇಷವಾಗಿ ಏಡಿಗಳನ್ನು ಕೋಲ್ಕತ್ತಕ್ಕೆ ಸಾಗಿಸಿ, ಅಲ್ಲಿಂದ ಚೀನಾಕ್ಕೆ ರಫ್ತು ಮಾಡಲು ನಮಗೆ ಈ ಸರಕು ಟರ್ಮಿನಲ್ ಪ್ರಯೋಜನಕಾರಿ’ ಎನ್ನುತ್ತಾರೆ ಸಾಗರೋತ್ಪನ್ನಗಳ ವ್ಯಾಪಾರೋದ್ಯಮಿ ಫಯಾಜ್ ಅಹ್ಮದ್.
‘ಜೀವಂತ ಏಡಿಗಳಿಗೆ ಚೀನಾ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇವುಗಳನ್ನು ತ್ವರಿತವಾಗಿ ಮತ್ತು ಸಕಾಲದಲ್ಲಿ ತಲುಪುವಂತೆ ರವಾನಿಸಲು ಐಸಿಟಿ ನೆರವಾಗುತ್ತಿದೆ’ ಎಂದು ಅವರು ತಿಳಿಸಿದರು.
‘ಸಮುದ್ರದ ನೀರಿನಿಂದ ಹೊರತೆಗೆದ ಬಳಿಕ ಏಡಿಗಳು ನಾಲ್ಕೈದು ದಿನಗಳವರೆಗೆ ಬದುಕಿರುತ್ತವೆ. ಎರಡು ದಿನಗಳಿಗೊಮ್ಮೆ 150 ಕೆ.ಜಿ.ಯಿಂದ 300 ಕೆ.ಜಿ.ಗಳಷ್ಟು ಜೀವಂತ ಏಡಿಗಳನ್ನು ಕೊಲ್ಕತ್ತಕ್ಕೆ ರವಾನಿಸುತ್ತೇವೆ. ನಾವು ಮೀನುಗಾರರಿಗೆ ಪ್ರತಿ ಕೆ.ಜಿ. ಏಡಿಗೆ ಸರಾಸರಿ ₹ 300 ನೀಡಬೇಕಾಗುತ್ತದೆ. ವಿಮಾನ ಶುಲ್ಕ ಹಾಗೂ ಅವುಗಳ ನಿರ್ವಹಣೆಗೆ ಪ್ರತಿ ಕೆ.ಜಿ.ಗೆ ₹ 100ರಿಂದ ₹ 150 ವೆಚ್ಚವಾಗುತ್ತದೆ’ ಎಂದು ಏಡಿಗಳ ವ್ಯಾಪಾರದಲ್ಲಿ ತೊಡಗಿರುವ ಅಬ್ದುಲ್ ಸಮದ್ ತಿಳಿಸಿದರು.
‘ಕಳುಹಿಸುವ ಏಡಿಗಳಲ್ಲಿ ಕೆಲವು ಕೋಲ್ಕತ್ತ ತಲುಪುವಷ್ಟರಲ್ಲಿ ಸಾಯುವುದೂ ಉಂಟು. ಸತ್ತ ಏಡಿಗಳನ್ನು ಬಿಸಾಡಬೇಕಾಗುತ್ತದೆ. ವಿಮಾನದ ಮೂಲಕ ಏಡಿಗಳನ್ನು ಕಳುಹಿಸುವ ಸೇವೆ ಆರಂಭವಾದ ಬಳಿಕ ಇಲ್ಲಿಂದ ನಾಲ್ಕೈದು ಗಂಟೆಗಳಲ್ಲಿ ಕೋಲ್ಕತ್ತಕ್ಕೆ ಏಡಿಗಳನ್ನು ಕಳುಹಿಸಲು ಸಾಧ್ಯವಾಗುತ್ತಿದೆ. ಅವು ಸಾಯುವ ಪ್ರಮಾಣವೂ ಕಡಿಮೆ’ ಎಂದು ಅವರು ವಿವರಿಸಿದರು.