ಬೆಂಗಳೂರು: ಐಬಿಎಸ್‌ಎ ವಿಶ್ವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡ ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಆಟಗಾರರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿನಂದಿಸಿದ್ದಾರೆ.
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡಲ್ಲಿರುವ ಕರ್ನಾಟಕದ ಮೂವರು ಆಟಗಾರರನ್ನು ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಮೂವರು ಆಟಗಾರರನ್ನು ಅಭಿನಂದಿಸಿದರು.
ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಿದ ಭಾರತದ ಅಂಧರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ ರಾಜ್ಯಪಾಲರು, ಈ ಗೌರವ ಹೆಚ್ಚಿಸುವಲ್ಲಿ ಕರ್ನಾಟಕದ ಆಟಗಾರರು ಪಾಲುದಾರರಾಗಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕರ್ನಾಟಕದ ವರ್ಷಾ ಯು. ಹಾಗೂ ತಂಡದ ಆಟಗಾರರಾದ, ದೀಪಿಕಾ, ಗಂಗವ್ವ ಅವರಿಗೆ ತಲಾ 51,000 ರೂ. ಮತ್ತು ಪುರುಷರ ತಂಡದ ಪ್ರಕಾಶ್ ಜೆ., ಸುನೀಲ್ ಕುಮಾರ್, ಬಸಪ್ಪ ಒಡ್ಡಗೋಲ್ ಆಟಗಾರರಿಗೆ ತಲಾ 41,000 ರೂ. ನಗದು ಪ್ರೋತ್ಸಾಹವನ್ನು ನೀಡಲಾಗುವುದು ಎಂದು ರಾಜ್ಯಪಾಲರು ಘೋಷಿಸಿದರು.
ಈ ಸಂದರ್ಭದಲ್ಲಿ ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೈಂಡ್ ಇಂಡಿಯಾದ ಆಜೀವ ಅಧ್ಯಕ್ಷ ಮಹಾಂತೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.