ಬೆಂಗಳೂರು: ಕರ್ನಾಟಕಕ್ಕೆ ಅನುದಾನ, ಅಕ್ಕಿ ನೀಡದಿರುವ ಕೇಂದ್ರ ಸರ್ಕಾರ ಪರದೇಶಗಳಿಗೆ ಸಹಾಯ ಹಸ್ತ ಚಾಚಿದೆ ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಕರ್ನಾಟಕಕ್ಕೆ ಅನುದಾನ ಕೊಡದ ಮೋದಿ ತಾಲಿಬಾನಿಗೆ ಬಜೆಟ್ಟಿನಲ್ಲಿ 200 ಕೋಟಿ ದಯಪಾಲಿಸಿದ್ದಾರೆ. ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡಲು ನಿರ್ಬಂಧಿಸಿದ ಕೇಂದ್ರ ಸರ್ಕಾರ ಸಿಂಗಾಪುರಕ್ಕೆ ಅಕ್ಕಿ ಕಳಿಸಿಕೊಡಲು ತುದಿಗಾಲಲ್ಲಿ ನಿಂತಿದೆ. ಮೋದಿಯವರು ಕರ್ನಾಟಕ ಪಾಕಿಸ್ತಾನದಲ್ಲಿದೆ ಎಂದು ತಿಳಿದಿದ್ದಾರಾ? ಮೋದಿ ಈ ದೇಶದ ಪ್ರಧಾನಿಯೋ, ಪರದೇಶದ ಪ್ರಧಾನಿಯೋ ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.
ತಮಿಳುನಾಡಿಗೆ ಕರ್ನಾಟಕ ಸರ್ಕಾರ ನೀರು ಬಿಡುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು (ಶುಕ್ರವಾರ) ಕರ್ನಾಟಕ ಬಂದ್ ನಡೆಸಿವೆ. ಈ ವಿಚಾರವಾಗಿಯೂ ರಾಜ್ಯ ಸರ್ಕಾರ, ಬಿಜೆಪಿ ಸಂಸದರ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದೆ.
ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದ್ದರೂ ಬಿಜೆಪಿಯ 25 ಸಂಸದರ ಬಾಯಿ ‘ಪರ್ಮನೆಂಟ್ ಬಂದ್’ ಆಗಿರುತ್ತದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಎಸಗಿದ ಅನ್ಯಾಯ ಒಂದೆರಡಲ್ಲ. ನೆರೆ ಪರಿಹಾರದಲ್ಲೂ ಅನ್ಯಾಯ, ಬರ ಪರಿಹಾರದಲ್ಲೂ ಅನ್ಯಾಯ, ಜಿಎಸ್‌ಟಿ ಹಂಚಿಕೆಯಲ್ಲೂ ಅನ್ಯಾಯ, ಕೇಂದ್ರದ ಯೋಜನೆಗಳ ಅನುದಾನದಲ್ಲೂ ಅನ್ಯಾಯ, ಈಗ ಕಾವೇರಿ ವಿಚಾರದಲ್ಲೂ ಅನ್ಯಾಯ. ಈ ಎಲ್ಲಾ ಅನ್ಯಾಯಕ್ಕೂ ಕರ್ನಾಟಕದ ಬಿಜೆಪಿ ಸಂಸದರದ್ದು ‘ಮೌನ’ ಮಾತ್ರ. ಕರ್ನಾಟಕ ಇರುವುದು ಚುನಾವಣಾ ರೋಡ್ ಶೋ ಮಾಡಲು ಮಾತ್ರ ಎಂದು ತಿಳಿದಿದ್ದಾರಾ ಮೋದಿಯವರು ಎಂದು ಕಾಂಗ್ರೆಸ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ ಪ್ರಶ್ನಿಸಿದೆ.