ಸಂಭಾಲ್ (ಯುಪಿ): ಪ್ರಶ್ನೆಗೆ ಉತ್ತರಿಸದ ಹಿಂದೂ ಸಹಪಾಠಿಯನ್ನು ಕಪಾಳಮೋಕ್ಷ ಮಾಡಲು ಮುಸ್ಲಿಂ ವಿದ್ಯಾರ್ಥಿಗೆ ಆದೇಶಿಸಿದ ಪ್ರಕರಣ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಯುಪಿಯ ಸಂಭಾಲ್ ಜಿಲ್ಲೆಯ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ದುಗಾವಾರ್ ಗ್ರಾಮದ ಖಾಸಗಿ ಶಾಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು, ಈ ಪ್ರಕರಣ ಸಂಬಂಧ ಕೋಮು ದ್ವೇಷವನ್ನು ಪ್ರಚೋದಿಸಿದ ಆರೋಪದ ಮೇಲೆ ಘಟನೆಗೆ ಕಾರಣವಾದ ಶಾಲಾ ಶಿಕ್ಷಕಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ಹುಡುಗನ ತಂದೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 153A (ಧರ್ಮ, ಜನಾಂಗ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಶ್ರೀಶ್ ಚಂದ್ರು ಹೇಳಿದರು. ಆರೋಪಿ ಶಿಕ್ಷಕಿಯನ್ನು ಶಾಯಿಸ್ತಾ ಎಂದು ಗುರುತಿಸಲಾಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.
ತನ್ನ ಮಗ ಶಾಲೆಯಲ್ಲಿ 5 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಅಲ್ಲಿ ತನ್ನ ತರಗತಿಯ ಶಿಕ್ಷಕಿ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ಕಾರಣ ಆತನಿಗೆ ಮುಸ್ಲಿಂ ವಿದ್ಯಾರ್ಥಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ. ಇನ್ನು, ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಎಸ್ಪಿ ಶ್ರೀಶ್ ಚಂದ್ರು ತಿಳಿಸಿದ್ದಾರೆ.