ತಿರುವನಂತಪುರಂ: ಆರು ಜನರ ಗುಂಪು ದಾಳಿ ಮಾಡಿ ಬೆನ್ನಿನ ಮೇಲೆ ಪಿಎಫ್‍ಐ ಎಂದು ಬರೆದಿದೆ ಅಂತ ಸುಳ್ಳು ಕಥೆ ಕಟ್ಟಿದ್ದ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ. ಯೋಧ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಸುಳ್ಳು ಹೇಳಿಕೆ ನೀಡಿದ್ದಾನೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಯೋಧ ಹಾಗೂ ಆತನ ಸ್ನೇಹಿತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಶೈನ್‍ಕುಮಾರ್ (35) ಗುಂಪೊಂದು ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದ. ಬಳಿಕ ಕೈ ಕಟ್ಟಿ ಬೆನ್ನಿನ ಮೇಲೆ ಪಿಎಫ್‍ಐ ಎಂದು ಬರೆದಿದ್ದಾರೆ ಎಂದು ದೂರು ನೀಡಿದ್ದ. ದೂರಿನನ್ವಯ ಕೊಲ್ಲಂನ ಕಡಕ್ಕಲ್ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಗದಿದ್ದಾಗ ಯೋಧ ಹಾಗೂ ಆತನ ಸ್ನೇಹಿತನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಗಿದೆ.
ಬಂಧಿತ ಯೋಧ, ತನ್ನ ನಿವಾಸದ ಹತ್ತಿರದ ರಬ್ಬರ್ ತೋಟದಲ್ಲಿ 6 ಜನರಿದ್ದ ಗುಂಪು ಭಾನುವಾರ ರಾತ್ರಿ ಈ ಕೃತ್ಯ ಎಸಗಿದೆ ಎಂದು ಹೇಳಿಕೊಂಡಿದ್ದ. ತನ್ನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ, ಥಳಿಸಿದ್ದರು. ಬಳಿಕ ಬೆನ್ನಲ್ಲಿ ಹಸಿರು ಬಣ್ಣ ಬಳಸಿ ಪಿಎಫ್‍ಐ ಎಂದು ಬರೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ನಿಷೇಧಿತ ಪಿಎಫ್‍ಐ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕೇರಳದ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ದಿನ ಈ ಘಟನೆ ವರದಿಯಾಗಿತ್ತು. ಎರ್ನಾಕುಲಂ, ಮಲಪ್ಪುರಂ, ವಯನಾಡ್ ಮತ್ತು ತ್ರಿಶೂರ್ ಸೇರಿದಂತೆ ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ಇ.ಡಿ ಸೋಮವಾರ ದಾಳಿ ನಡೆಸಿತ್ತು.