ಖಲಿಸ್ತಾನ್ ಉಗ್ರನ ಹತ್ಯೆ ನಂತರ ಕೆನಡಾ ಮತ್ತು ಭಾರತದ ನಡುವೆ ಮುಸುಕಿನ ಗುದ್ದಾಟ ಮುಂದುವರಿದೆ. ಇದೀಗ ಈ ಕೆನಡಾದ ಸಿಖ್ಖರು ಒಟ್ಟಾವಾ, ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಮುಂದೆ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಪ್ರತಿಭಟನೆ ವೇಳೆ ಭಾರತದ ರಾಷ್ಟ್ರಧ್ವಜವನ್ನು ಸುಟ್ಟು ಹಾಕಿದ್ದು, ಪ್ರಧಾನಿ ಮೋದಿ ಅವರ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ಟೊರೊಂಟೊದಲ್ಲಿ ಸುಮಾರು 100 ಜನ ಹಾಗೂ ವ್ಯಾಂಕೋವರ್‌ನಲ್ಲಿ ಸುಮಾರು 200 ಪ್ರತಿಭಟನಾಕಾರರು ಭಾಗವಹಿಸಿದ್ದರು ಎಂದು ವರದಿ ಹೇಳಿದೆ. ಇಂದು ಬೆಳಿಗ್ಗೆ ಟೊರೊಂಟೊದಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಯ ಮುಂದೆ ಪ್ರತಿಭಟನೆ ಮಾಡಲು ಶುರು ಮಾಡಿದ್ದಾರೆ. ಈ ಸಮಯದಲ್ಲಿ , “ಖಲಿಸ್ತಾನ್” ಧ್ವಜಗಳನ್ನು ಹಾರಿಸಿದ್ದಾರೆ. ಇದು ಭಾರತದಲ್ಲಿರುವ ಸಿಖ್ಖರಿಗೆ ಪ್ರತ್ಯೇಕ ರಾಜ್ಯದ ನೀಡುವ ಹೋರಾಟಕ್ಕೆ ಬೆಂಬಲದ ಸಂಕೇತವಾಗಿದೆ ಎಂದು ಹೇಳಲಾಗಿದೆ.
ಈ ಪ್ರತಿಭಟನೆ ಸಮಯದಲ್ಲಿ ಖಲಿಸ್ತಾನಿಗಳ ಪರವಾಗಿ ನಿಂತ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಧನ್ಯವಾದ ತಿಳಿಸಿದರು. ಇನ್ನು ಹತ್ಯೆ ಆಗಿರುವ ಖಲಿಸ್ತಾನಿಗಳಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದರಲ್ಲಿ ಒಬ್ಬ ಪ್ರತಿಭಟನಕಾರ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಕೃತಜ್ಞರಾಗಿರುತ್ತೇವೆ. ಇಂತಹ ಹೇಡಿತನದ ಕೃತ್ಯಕ್ಕೆ ಸರಿಯಾದ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.ಕೆನಡಾದ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ನಂತರ ಕೆನಡಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಸಾವಿಗೆ ಭಾರತವೇ ಕಾರಣ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ. ಆದರೆ ಭಾರತ ಇದು ಆಧಾರ ರಹಿತ ಆರೋಪ ಎಂದು ಹೇಳಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಗುಪ್ತಚರ ಸಂಸ್ಥೆ ಮೂಲಕ ತನಿಖೆಯನ್ನು ನಡೆಸುತ್ತಿದೆ ಎಂದು ಹೇಳಿದೆ.