ಶ್ರೀನಗರ,ಸೆಪ್ಟೆಂಬರ್ 14: ಬುಧವಾರದಂದು ಅನಂತ್ನಾಗ್ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ತಮ್ಮ ಪುತ್ರ ಡಿಎಸ್‌ಪಿ ಹುಮಾಯೂನ್ ಭಟ್ಗೆ ಅಪ್ಪ ಕಣ್ಣೀರಿನ ವಿದಾಯ ಹೇಳಿದ್ದಾರೆ. ಭಟ್ ಅವರ ಪಾರ್ಥಿವ ಶರೀರದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ನಿವೃತ್ತ ಡಿಐಜಿ ಗುಲಾಮ್ ಹಸನ್ ಭಟ್ ಅವರು ಹೂವಿಡುವ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರೂ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ಅನಂತ್‌ನಾಗ್ ನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೂವರು ಸೇನಾ ಸಿಬ್ಬಂದಿಗಳಲ್ಲಿ ಹುಮಾಯೂನ್ ಭಟ್ ಒಬ್ಬರು. ಭಟ್ ಹೊರತಾಗಿ, ಕರ್ನಲ್ ಮನ್‌ಪ್ರೀತ್ ಸಿಂಗ್, 19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್, ಮೇಜರ್ ಆಶಿಶ್ ಧೋನಾಚ್, ಕಾರ್ಯಾಚರಣೆಯ ಸಮಯದಲ್ಲಿ ಹುತಾತ್ಮರಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಭಟ್ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಟ್ ಅವರು ಎರಡು ತಿಂಗಳ ಹೆಣ್ಣು ಮಗುವಿನ ತಂದೆಯಾಗಿದ್ದು, ಬುಧವಾರ ಸಂಜೆ ಅಂತ್ಯಕ್ರಿಯೆ ನಡೆದಿದೆ.
ಹುಮಾಯೂನ್ ಜೆಕೆಪಿಎಸ್‌ನ 2018 ರ ಬ್ಯಾಚ್ ಅಧಿಕಾರಿಯಾಗಿದ್ದು, ಕಳೆದ ವರ್ಷ ವಿವಾಹವಾಗಿದ್ದು ಇತ್ತೀಚೆಗೆ ಅವರಿಗೆ ಹೆಣ್ಣು ಮಗು ಜನಿಸಿತ್ತು.
ನಾವು ಯೋಚಿಸಬೇಕು. ಏಕೆಂದರೆ ನಾವು ಪಾಕಿಸ್ತಾನವನ್ನು ಪ್ರತ್ಯೇಕಿಸದ ಹೊರತು ಅದು ಸಾಮಾನ್ಯ ವ್ಯವಹಾರ ಎಂದು ಅವರು ಭಾವಿಸುತ್ತಾರೆ. ನಾವು ಅವರ ಮೇಲೆ ಒತ್ತಡ ಹೇರಬೇಕಾದರೆ, ನಾವು ಅವರನ್ನು ಪ್ರತ್ಯೇಕಿಸಬೇಕು. ನೀವು ಸಾಮಾನ್ಯ ಎಂದು ಭಾವಿಸುವವರೆಗೆ ಯಾವುದೇ ಸಾಮಾನ್ಯ ಸಂಬಂಧವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿದುಕೊಳ್ಳಬೇಕು ಎಂದು ಕೇಂದ್ರ ಸಚಿವ ಜನರಲ್ ವಿಕೆ ಸಿಂಗ್ ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಗುರುವಾರ ಹುಮಾಯೂನ್ ಭಟ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಲು ತೆರಳಿದ್ದರು. ಇದಕ್ಕೆ ಅಂತ್ಯ ಕಾಣುತ್ತಿಲ್ಲ. ಇವತ್ತು ರಾಜೌರಿಯಲ್ಲಿ ಎನ್‌ಕೌಂಟರ್ ನಡೆದಿದೆ, ದಿನನಿತ್ಯ ಎನ್‌ಕೌಂಟರ್‌ಗಳು ನಡೆಯುತ್ತಿವೆ. ಭಯೋತ್ಪಾದನೆ ಮುಗಿಯಿತು ಎಂದು ಸರ್ಕಾರ ದಿನನಿತ್ಯ ಬೊಬ್ಬೆ ಹಾಕುತ್ತಿದೆ. ಈಗ ಹೇಳಿ ಭಯೋತ್ಪಾದನೆ ಮುಗಿಯಿತೇ? ಶಾಂತಿಯನ್ನು ಸಾಧಿಸುವ ಮಾರ್ಗವನ್ನು ಕಂಡುಹಿಡಿಯುವವರೆಗೆ ಇದು ಮುಗಿಯುವುದಿಲ್ಲ, ಹೋರಾಟದ ಮೂಲಕ ಶಾಂತಿಯನ್ನು ಸಾಧಿಸಲಾಗುವುದಿಲ್ಲ, ಅದು ಮಾತುಕತೆಯ ಮೂಲಕ ಸಾಧ್ಯವಾಗಬಹುದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.