ಸ್ಕ್ರಬ್ ಟೈಫಸ್​ನಿಂದ ಭಾರತದಲ್ಲಿ 14 ಸಾವು; ಏನಿದು ಮಾರಕ ಸೋಂಕು?

By: Ommnews

Date:

Share post:

ನವದೆಹಲಿ: ಭಾರತದಲ್ಲಿ ಸ್ಕ್ರಬ್ ಟೈಫಸ್ ಎಂಬ ಸಾಂಕ್ರಾಮಿಕ ರೋಗ ಬಹಳ ವೇಗವಾಗಿ ಹರಡುತ್ತಿದೆ. ಈ ಸೋಂಕಿನಿಂದ ಭಾರತದ ಕೆಲವು ಭಾಗಗಳಲ್ಲಿ ಅನಿರೀಕ್ಷಿತ ಸಾವುಗಳು ಉಂಟಾಗುತ್ತಿದೆ. ಒಡಿಶಾದಲ್ಲಿ ಸ್ಕ್ರಬ್ ಟೈಫಸ್ ಸೋಂಕಿನಿಂದ 5 ಜನರು ಸಾವನ್ನಪ್ಪಿದ್ದರೆ, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ 9 ಜನರು ಸೋಂಕಿಗೆ ಬಲಿಯಾಗಿದ್ದಾರೆ.

Advertisement
Advertisement
Advertisement

ಒಡಿಶಾದ ಬರ್ಗಢ್ ಮುಖ್ಯ ಜಿಲ್ಲಾ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿ ಸಾಧು ಚರಣ್ ದಾಸ್ ಪ್ರಕಾರ, ಸ್ಕ್ರಬ್ ಟೈಫಸ್ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿದ ಒಟ್ಟು 5 ಜನರಲ್ಲಿ ಎರಡು ಪ್ರಕರಣಗಳು ಸೊಹೆಲಾ ಬ್ಲಾಕ್‌ನಿಂದ ವರದಿಯಾಗಿದ್ದು, ಉಳಿದವರು ಅಟ್ಟಬಿರಾ, ಭೇದೆನ್ ಮತ್ತು ಬರ್ಪಾಲಿ ಪ್ರದೇಶಗಳಿಗೆ ಸೇರಿದವರು. ಇತರ ನಾಲ್ವರಿಗೆ ಸ್ಕ್ರಬ್ ಟೈಫಸ್ ಪಾಸಿಟಿವ್ ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಶಿಮ್ಲಾದಲ್ಲಿ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಐಜಿಎಂಸಿ) ಆಸ್ಪತ್ರೆಯಲ್ಲಿ ಈ ಮಾರಣಾಂತಿಕ ಸೋಂಕಿನ ಲಕ್ಷಣಗಳನ್ನು ಹೊಂದಿರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಅಧಿಕಾರಿಗಳ ಪ್ರಕಾರ, ಶಿಮ್ಲಾದಲ್ಲಿ ಒಟ್ಟು 295 ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಏನಿದು ಸ್ಕ್ರಬ್ ಟೈಫಸ್?

ಸ್ಕ್ರಬ್ ಟೈಫಸ್ ಎಂಬುದು ಓರಿಯೆಂಟಿಯಾ ಸುಟ್ಸುಗಮುಶಿ ಬ್ಯಾಕ್ಟೀರಿಯಂನಿಂದ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು. ಇದು ಸೋಂಕಿತ ಸಣ್ಣ ಹುಳಗಳ ಕಚ್ಚುವಿಕೆಯ ಮೂಲಕ ಹರಡುತ್ತದೆ. ಇದರ ಸಾಮಾನ್ಯ ರೋಗಲಕ್ಷಣಗಳೆಂದರೆ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಕೆಂಪನೆಯ ಕಜ್ಜಿಗಳು. ಈ ಬ್ಯಾಕ್ಟೀರಿಯಾ ಹೆಚ್ಚಾಗಿ ಹುಲ್ಲು, ಪೊದೆಗಳು, ಇಲಿಗಳು, ಮೊಲಗಳು ಮತ್ತು ಅಳಿಲುಗಳಂತಹ ಪ್ರಾಣಿಗಳ ದೇಹದ ಮೇಲೆ ಕಂಡುಬರುತ್ತದೆ.

ಸ್ಕ್ರಬ್ ಟೈಫಸ್​ನ ರೋಗಲಕ್ಷಣಗಳು:

ಸ್ಕ್ರಬ್ ಟೈಫಸ್‌ನ ಲಕ್ಷಣಗಳು ಸಾಮಾನ್ಯವಾಗಿ ಹುಳ ವ್ಯಕ್ತಿಯನ್ನು ಕಚ್ಚಿದ 10 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ವಿಪರೀತ ಚಳಿ ಹಾಗೂ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಸೋಂಕಿತ ಹುಳ ಕಚ್ಚಿದ ಜಾಗದ ಸುತ್ತ ಕೆಂಪನೆಯ ರಿಂಗ್ ಮೂಡುವುದು ಈ ರೋಗದ ಪ್ರಮುಖ ಲಕ್ಷಣಗಳು. ಈ ಸ್ಕ್ರಬ್ ಟೈಫಸ್‌ ಸೋಂಕು ತೀವ್ರವಾದರೆ ರಕ್ತಸ್ರಾವ ಮತ್ತು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು. ರೋಗಿ ಕೋಮಾಕ್ಕೂ ಹೋಗಬಹುದು. ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ಈ ರೋಗ ಮಾರಣಾಂತಿಕವೂ ಆಗಬಹುದು.

ತಜ್ಞರ ಪ್ರಕಾರ, ಸ್ಕ್ರಬ್ ಟೈಫಸ್‌ ಸೋಂಕಿಗೆ ಒಳಗಾದ 10 ದಿನಗಳ ನಂತರ ರೋಗಲಕ್ಷಣಗಳು ಪ್ರಾರಂಭವಾಗುತ್ತವೆ. ಈ ರೋಗಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ ಇದು ಬಹು ಅಂಗಗಳ ವೈಫಲ್ಯಕ್ಕೆ ಕಾರಣವಾಗಬಹುದು. ಇದರಿಂದ ಜೀವಕ್ಕೂ ಅಪಾಯವಾಗಬಹುದು. ಸಾಮಾನ್ಯವಾಗಿ ತೋಟದ ಕೆಲಸ ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಈ ಸೋಂಕು ತಗುಲುವ ಅಪಾಯ ಹೆಚ್ಚು.

ಸ್ಕ್ರಬ್ ಟೈಫಸ್ ಅನ್ನು ತಡೆಗಟ್ಟಲು ಪ್ರಸ್ತುತ ಯಾವುದೇ ಲಸಿಕೆ ಇಲ್ಲ. ಆದರೆ ಸೋಂಕಿತ ಹುಳಗಳ ಸಂಪರ್ಕವನ್ನು ತಪ್ಪಿಸುವ ಮೂಲಕ ನಿಮ್ಮ ಅಪಾಯವನ್ನು ಕಡಿಮೆ ಮಾಡಬಹುದು. ಈ ರೋಗ ಹೆಚ್ಚಾಗಿರುವ ಪ್ರದೇಶಗಳಿಗೆ ಕೆಲ ಕಾಲ ಪ್ರಯಾಣವನ್ನು ಮಾಡಬೇಡಿ. ಹುಳಗಳು ಸಾಮಾನ್ಯವಾಗಿ ಕಂಡುಬರುವ ದಟ್ಟವಾದ ಗಿಡ-ಮರಗಳಿರುವ ಸ್ಥಳಗಳಿಂದ ದೂರವಿರಿ. ಶಿಶುಗಳು ಮತ್ತು ಚಿಕ್ಕ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಅವರ ಕೈ ಮತ್ತು ಕಾಲುಗಳನ್ನು ಮುಚ್ಚಬೇಕು. ಆದಷ್ಟೂ ಕಾಡಿನ ಪ್ರದೇಶದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಬೇಡಿ.

ಮನೆಯಲ್ಲಿ ಇಲಿಗಳ ನಿಯಂತ್ರಣ, ಶುಚಿತ್ವ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಸಾಕುಪ್ರಾಣಿಗಳನ್ನು ಮುಟ್ಟುವಾಗ ಎಚ್ಚರಿಕೆ ವಹಿಸುವುದು, ಅವುಗಳ ಚರ್ಮದಲ್ಲಿ ಹುಳ ಉಂಟಾಗದಂತೆ ಎಚ್ಚರ ವಹಿಸುವುದು, ಮನೆಯ ಸುತ್ತಲಿನ ಪೊದೆಗಳನ್ನು ತೆಗೆದುಹಾಕುವುದು ಸೇರಿದಂತೆ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸುವುದರಿಂದ ಸ್ಕ್ರಬ್ ಟೈಫಸ್ ಸೋಂಕನ್ನು ನಿಯಂತ್ರಿಸಬಹುದು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section