ಬೆಂಗಳೂರು: ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ‘ಬೆಂಗಳೂರು ಕಂಬಳ’ ಹಬ್ಬವನ್ನು ಆಯೋಜಿಸಲಾಗಿದ್ದು, ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
ರಾಜ್ಯದ ಜನತೆಯ ಮಧ್ಯೆ ಜಪಾನ್ ಪ್ರಜೆಯೊಬ್ಬರು ಕಂಬಳ ನೋಡಲು ಬಂದಿದ್ದು, ತಮ್ಮ ಅನುಭವವನ್ನು ಸಂತಸದಿಂದ ಹಂಚಿಕೊಂಡಿದ್ದಾರೆ.
ವಿವಿಧ ಕಾರಣಕ್ಕೆ ಬೆಂಗಳೂರಿಗೆ ಭೇಟಿ ನೀಡುವ ವಿದೇಶಿಗರ ಸಂಖ್ಯೆ ಹೆಚ್ಚಿದೆ. ನಗರದ ವಿವಿಧ ಹೋಟೆಲ್ಗಳಲ್ಲಿ ತಂಗಿದ್ದ ವಿದೇಶಿ ಮಂದಿಗೆ, ಇಲ್ಲೇ ಹತ್ತಿರದಲ್ಲಿ ಕಂಬಳ ನಡೆಯುತ್ತಿದೆ ಎಂಬ ವಿಷಯ ಗೊತ್ತಾಗಿದೆ. ಹೀಗಾಗಿ ಕೋಣಗಳ ಓಟ ಹೇಗಿರುತ್ತದೆ ಎಂಬುದನ್ನು ಕಾಣಲು ಅರಮನೆ ಮೈದಾನಕ್ಕೆ ಆಗಮಿಸಿದ್ದರು.ವಿದೇಶಿಗರು ಕೋಣಗಳ ಓಟ ಕಂಡು ಪುಳಕಿತರಾದರು.
ನೆದರ್ಲೆಂಡ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಅಮೆರಿಕಾ ದೇಶದ ಮಂದಿ ಕಂಬಳವನ್ನು ಕಣ್ತುಂಬಿಕೊಂಡರು. ಜತೆಗೆ ಕೋಣಗಳ ಓಟವನ್ನು ಸೆರೆಹಿಡಿಯಲು ಕೆಲ ವಿದೇಶಿ ಫೋಟೋಗ್ರಾಫರ್ಗಳು ತಮ್ಮ ಭಾರತೀಯ ಸ್ನೇಹಿತರೊಂದಿಗೆ ಆಗಮಿಸಿದ್ದರು.
ಬೆಂಗಳೂರು ಕಂಬಳವನ್ನು ಕಂಡು ಉತ್ಸಾಹದಿಂದ ಮಾತನಾಡಿದ ಜಪಾನ್ ನಾಗರಿಕ ಜರು, ‘ಕಂಬಳವನ್ನು ನೋಡಲು ಕುತೂಹಲವಿತ್ತು. ಈ ಕ್ರೀಡೆಯನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ. ಇದರ ಬಗ್ಗೆ ನನ್ನ ಸ್ನೇಹಿತ ಮಾಹಿತಿ ನೀಡಿದ ತಕ್ಷಣ ಇಷ್ಟವಾಯಿತು’ ಎಂದರು.
‘ಕಂಬಳವನ್ನು ನೋಡಲೇಬೇಕು ಎಂದು ಸ್ನೇಹಿತರ ಜತೆ ಬಂದಿದ್ದೇನೆ. ನಾನು ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದು, ಇಂತಹ ಕ್ರೀಡೆ, ಇಲ್ಲಿನ ಸಂಸ್ಕೃತಿ, ಜನ, ಜಾಗವನ್ನು ತಿಳಿದಯಕೊಳ್ಳಲು ಸಹಾಯ ಮಾಡುತ್ತದೆ. ಕೋಣದ ಓಟವನ್ನು ನೋಡಲು ಬಹಳ ಖುಷಿಯಿದೆ. ಇದರೊಂದಿಗೆ ದಕ್ಷಿಣ ಕನ್ನಡ ಭಾಗದ ತಿಂಡಿ-ತಿನಿಸುಗಳು ಕೂಡ ಇಷ್ಟವಾಯಿತು’ ಎಂದು ಜರು ತಮ್ಮ ಅನುಭವವನ್ನು ಹಂಚಿಕೊಂಡರು.