ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಇಂದಿಗೆ 13ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ತಡರಾತ್ರಿ ತಾಂತ್ರಿಕ ಅಡಚಣೆಯಿಂದಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗಿದೆ.
ಸಿಲ್ಕ್ಯಾರಾ ಸುರಂಗದ ಕಡೆಯಿಂದ ಅಮೆರಿಕನ್ ಆಗುರ್ ಯಂತ್ರವನ್ನು ಬಳಸಿ ಕೊರೆಯುವ ಕೆಲಸ ನಡೆಯುತ್ತಿತ್ತು. ರಕ್ಷಣಾ ತಂಡ ಇಲ್ಲಿಯವರೆಗೆ ಸುಮಾರು 46.8 ಮೀ. ವರೆಗೆ ಕೊರೆದಿದ್ದಾರೆ. ಆದರೆ ಗುರುವಾರ ತಡರಾತ್ರಿ ಮತ್ತೊಂದು ತಾಂತ್ರಿಕ ಅಡಚಣೆ ಉಂಟಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕೊರೆಯುವ ಯಂತ್ರವನ್ನು ದುರಸ್ತಿಗೊಳಿಸಲು ಕೆಲವು ಗಂಟೆ ತೆಗೆದುಕೊಳ್ಳುತ್ತದೆ. ಬೇರೆ ಯಾವುದೇ ಸಮಸ್ಯೆ ಉಂಟಾಗದಿದ್ದರೆ ಶುಕ್ರವಾರ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
13 ದಿನಗಳಿಂದ ಸುರಂಗದೊಳಗೆ ಸಿಲುಕಿ ಪರದಾಡುತ್ತಿರುವ 41 ಕಾರ್ಮಿಕರನ್ನು ಇಂದು ಹೊರತರುವ ನಿರೀಕ್ಷೆಯಿದೆ. ಅಂಬುಲೆನ್ಸ್‌ಗಳು, ವೈದ್ಯರ ತಂಡ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳೊಂದಿಗೆ ಸ್ಥಳದಲ್ಲಿ ಹಾಜರಿದ್ದಾರೆ. ಕಾರ್ಮಿಕರಿಗೆ ನೀರು, ಆಹಾರ ವಿತರಿಸಲು ಪೈಪ್ ಅನ್ನು ಅಳವಡಿಸಲಾಗಿದೆ.