ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ ಎಲ್ಲಾ ನದಿಗಳಲ್ಲೂ ಯತೇಚ್ಛವಾಗಿ ಮರಳು ಸಂಗ್ರಹವಾಗುತ್ತದೆ. ಆದ್ರೆ ಕಟ್ಟಡ ಕಾಮಗಾರಿ ಆಗಬೇಕು ಅಂದ್ರೆ ಕಾಮಗಾರಿಗೆ ಮರಳು ಸಿಗ್ತಾ ಇಲ್ಲ, ಕಾಳ ಸಂತೆಯಲ್ಲೇ ಮರಳು ಖರೀದಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಗುತ್ತಿಗೆದಾರರು ತಮ್ಮ ಕೆಲಸ ಸ್ಥಗಿತಗೊಳಿಸೋದಾಗಿ ಎಚ್ಚರಿಕೆ ನೀಡಿದ್ದಾರೆ.
ನದಿಯಿಂದ ಮರಳು ತೆಗೆಯುವ ಗುತ್ತಿಗೆಯನ್ನು ಪಡೆದುಕೊಂಡಿರೋ ಸಾವಿರಾರು ಜನರಿದ್ದಾರಾದ್ರೂ ಸದ್ಯಕ್ಕೆ ಸರ್ಕಾರ ಈ ಗುತ್ತಿಗೆಯನ್ನು ತಡೆ ಹಿಡಿದಿದೆ. ಇನ್ನು ಸಿಆರ್‌ಝಡ್ ವ್ಯಾಪ್ತಿಯಲ್ಲಿಯೂ ಮರಳುಗಾರಿಕೆಗೆ ನಿಷೇಧವಿದ್ದು, ಸದ್ಯ ಸರ್ಕಾರದ ಮುಂದೆ ಇತ್ಯರ್ಥಕ್ಕೆ ಬಾಕಿ ಇದೆ.
ಈ ಎಲ್ಲ ಕಾರಣಗಳಿಂದಾಗಿ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಹಾಗೂ ಖಾಸಗಿಯಾಗಿ ನಡೆಯುತ್ತಿರುವ ಕಾಮಗಾರಿಗಳಿಗೆ ಮರಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹೀಗೇ ಮುಂದುವರೆದ್ರೆ ಇನ್ನು ಹತ್ತು ದಿನಗಳಲ್ಲಿ ಸಂಪೂರ್ಣ ಕಾಮಗಾರಿಗಳು ಸ್ಥಗಿತಗೊಳ್ಳಲಿದ್ದು, ಗುತ್ತಿಗೆದಾರರು ಸಂಕಷ್ಟ ಎದುರಿಸಬೇಕಾದ ಆತಂಕ ಎದುರಾಗಿದೆ. ಕಾಮಗಾರಿ ಸ್ಥಗಿತಗೊಂಡ್ರೆ ಕಾರ್ಮಿಕರು, ಹಾಗೂ ಕಟ್ಟಡ ಕಾಮಗಾರಿಗೆ ಪೂರಕವಾಗಿ ಕೆಲಸ ಮಾಡುವ ಸಾವಿರಾರು ಜನರು ಕೆಲಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲಿ ಹಾಗೂ ಸಮುದ್ರದ ಹಿನ್ನೀರಿನಲ್ಲಿ ಯತೇಚ್ಛ ಮರಳು ಸಂಗ್ರಹವಾಗುವ ಕಾರಣ ಮರಳು ದಿಬ್ಬಗಳನ್ನು ತೆರವು ಮಾಡಲು ಮರಳುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆದ್ರೆ ಎಂದಿನಂತೆ ಅಕ್ಟೋಬರ್ ಮೊದಲ ವಾರದಲ್ಲೇ ಮರಳುಗಾರಿಕೆ ಆರಂಭವಾಗಬೇಕಿತ್ತಾದ್ರೂ, ಈ ಬಾರಿ ಮಳೆಗಾಲ ಮುಗಿದ ಬಳಿಕವೂ ಸರ್ಕಾರ ಮರಳುಗಾರಿಕೆಗೆ ಅವಕಾಶ ಕಲ್ಪಿಸಿಲ್ಲ. ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ಗುರುತಿಸಿರೋ ಗಣಿ ಇಲಾಖೆ ಮರಳು ತೆಗೆಯಲು ಅನುಮತಿಗಾಗಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆಯಾದ್ರೂ ಸರ್ಕಾರ ಇನ್ನೂ ಉತ್ತರ ನೀಡಿಲ್ಲ.
ಇನ್ನು ನದಿಗಳಲ್ಲಿ ಮರಳು ತೆಗೆಯುವ ಗುತ್ತಿಗೆ ಪಡೆದವರಿಗೆ ವೇ ಬ್ರಿಜ್ ನಿರ್ಮಾಣ ಮಾಡಬೇಕು ಅನ್ನೋ ಕಾನೂನು ತಂದ ಕಾರಣ ನದಿಯಲ್ಲೂ ಮರಳುಗಾರಿಕೆ ನಡೆಯುತ್ತಿಲ್ಲ. ಕಾಳ ಸಂತೆಯಲ್ಲಿ ಸಿಗ್ತಾ ಇರೋ ಮರಳು ಬೆಂಗಳೂರು, ಕೇರಳ ಕಡೆಗೆ ರವಾನೆಯಾಗುತ್ತಿದೆ.
ಈಗ ಜಾರಿಯಲ್ಲಿರೋ ಮರಳು ನೀತಿಯನ್ನು ಅನುಸರಿಸೋದು ಕಷ್ಟವಾಗಿರೋ ಕಾರಣ ಮರಳು ಗುತ್ತಿಗೆದಾರರೂ ಮರಳುಗಾರಿಕೆ ನಿಲ್ಲಿಸಿದ್ದಾರೆ. ಇದು ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ಸಹಿತ ಹಲವು ಕಾಮಗಾರಿಗಳ ಮೇಲೆ ಪರಿಣಾಮ ಬೀರಿದ್ದು, ಕಾರ್ಮಿಕರಲ್ಲೂ ಆತಂಕ ಮೂಡಿಸಿದೆ. ಈ ಸಮಸ್ಯೆ ಬಗೆ ಹರಿಸದೇ ಇದ್ದಲ್ಲಿ ಕಟ್ಟಡ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸೋ ಅನಿವಾರ್ಯತೆಗೆ ಸಿಲುಕಿದ್ದಾರೆ.
ತಕ್ಷಣ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡುವ ಮೂಲಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನಿಸಬೇಕಾಗಿದೆ.