ಮಂಗಳೂರು : ಶಾಲಾ ಮಕ್ಕಳ ಬ್ಯಾಗ್ ಹೊರೆಯನ್ನು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ದ. ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗ ಇರುವ ವ್ಯವಸ್ಥೆಯಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಹೊರೆಯಾಗುತ್ತಿದೆ. ಕಡಿತ ಮಾಡಲು ಪ್ರಯತ್ನಿಸಲಾಗುತ್ತಿದೆ. ಈಗ ಇರುವ ಭಾರಕ್ಕಿಂತ ಅರ್ಧಕ್ಕೂ ಕಡಿಮೆ ಭಾರ ಇರುವಂತೆ ವ್ಯವಸ್ಥೆ ಮಾಡಲಾಗುವುದು. ನನ್ನ ಬಯಕೆ ಆರನೇ ಒಂದು ಪಟ್ಟು ಭಾರ ಇರುವಂತೆ ಮಾಡಬೇಕೆಂಬುದು ಇತ್ತು. ಆದರೆ ಮೂರನೇ ಒಂದು ಪಟ್ಟು ಇರುವಂತೆ ಮಾಡಲಾಗುವುದು. ಬ್ಯಾಗ್ ಹೊರೆ ಕಡಿಮೆ ಮಾಡುವ ತೀರ್ಮಾನದಿಂದ ಶಿಕ್ಷಣದ ಗುಣಮಟ್ಟಕ್ಕೆ ತೊಂದರೆಯಾಗುವುದಿಲ್ಲ ಎಂದರು.
ಇನ್ನು ಎಸ್ಎಸ್ಎಲ್ಸಿಗೆ ಮೂರು ಬಾರಿ ಎಕ್ಸಾಂ ಮಾಡಲು ನಿರ್ಧರಿಸಲಾಗಿದೆ. ಮೊದಲ ಬಾರಿಗೆ ನಡೆದ ಪರೀಕ್ಷೆಯಲ್ಲಿ ಫೇಲಾದ ಅಥವಾ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಬೇಕಾದ ಸಬ್ಜೆಕ್ಟ್ನಲ್ಲಿ ಎರಡನೇ ಪರೀಕ್ಷೆ ತೆಗೆದುಕೊಳ್ಳಬಹುದು. ಅದರಲ್ಲಿಯೂ ತೃಪ್ತರಾಗದಿದ್ದರೆ ಮೂರನೇ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಮೂರರಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಬಂದಿದೆಯೋ ಅದನ್ನು ಪರಿಗಣಿಸಲಾಗುವುದು. ಇದರಿಂದ ಅವರಿಗೆ ಅದೇ ವರ್ಷದಲ್ಲಿ ಮುಂದಿನ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯಿಂದ ಆ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಅಡ್ಮಿಷನ್ ಪಡೆದು ಶಾಲೆಗೆ ಹೋಗಲು ಒಂದು ತಿಂಗಳು ವಿಳಂಬವಾಗಬಹುದು. ಅದನ್ನು ಆಯಾ ಶಿಕ್ಷಣ ಸಂಸ್ಥೆಗಳು ಬ್ರಿಡ್ಜ್ ಕೋರ್ಸ್ನಿಂದ ಅದನ್ನು ಸರಿದೂಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.