ಹೈದರಾಬಾದ್: ಸಂಘಟಿತ ಬೌಲಿಂಗ್ ಪ್ರದರ್ಶನದಿಂದ ಪಾಕಿಸ್ತಾನ ತಂಡ, ನೆದರ್ಲ್ಯಾಂಡ್ಸ್ ವಿರುದ್ಧ 81 ರನ್‌ಗಳ ಜಯ ಸಾಧಿಸಿದ್ದು, 2023ರ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಇಲ್ಲಿನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ 49 ಓವರ್‌ಗಳಲ್ಲಿ 286 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕ್ ನೀಡಿದ ಗುರಿ ಬೆನ್ನತ್ತಿದ್ದ ನೆದರ್ಲ್ಯಾಂಡ್ಸ್ ತಂಡವು 41 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಚೇಸಿಂಗ್ ಆರಂಭಿಸಿದ ನೆದರ್ಲ್ಯಾಂಡ್ಸ್ ಪದ ಆರಂಭಿಕ ಆಟಗಾರ ವಿಕ್ರಮಜಿತ್ ಸಿಂಗ್ 52 ರನ್ (67 ಎಸೆತ, 4 ಬೌಂಡರಿ, 1 ಸಿಕ್ಸರ್), ಆಲ್‌ರೌಂಡರ್ ಬಾಸ್ ಡಿ ಲೀಡೆ 67 ರನ್ (68 ಎಸೆತ, 2 ಸಿಕ್ಸರ್, 6 ಬೌಂಡರಿ) ಗಳಿಸಿ ತಂಡಕ್ಕೆ ನೆರವಾದರು. ಉಳಿದ ಆಟಗಾರರು ಪಾಕ್ ಬೌಲರ್‌ಗಳ ಮಾರಕ ದಾಳಿ ಎದುರಿಸುವಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿಕೊಂಡರು. ಪರಿಣಾಮ ನೆದರ್ಲ್ಯಾಂಡ್ಸ್ 205 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 3 ವಿಕೆಟ್ ಕಿತ್ತರೆ, ಹಸನ್ ಅಲಿ 2 ವಿಕೆಟ್ ಹಾಗೂ ಶಾಹೀನ್ ಶಾ ಅಫ್ರಿದಿ, ಇಫ್ತಿಕಾರ್ ಅಹ್ಮದ್, ಮೊಹಮ್ಮದ್ ನವಾಜ್ ಹಾಗೂ ಶಾದಾಬ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಾಕ್ ತಂಡ ಮೊದಲ 9 ಓವರ್‌ಗಳಲ್ಲಿ ಕೇವಲ 38 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಮಧ್ಯ ಕ್ರಮಾಂಕದಲ್ಲಿ ಮೊಹಮ್ಮದ್ ರಿಜ್ವಾನ್ ಹಾಗೂ ಸೌದ್ ಶಕೀಲ್ ಬ್ಯಾಟಿಂಗ್ ನೆರವಿನಿಂದ ತಂಡ ಚೇರಿಸಿಕೊಂಡಿತು. ರಿಜ್ವಾನ್ 75 ಎಸೆತಗಳಲ್ಲಿ 68 ರನ್ (8 ಬೌಂಡರಿ) ಗಳಿಸಿದ್ರೆ, ಶಕೀಲ್ 52 ಎಸೆತಗಳಲ್ಲಿ 68 ರನ್ (9 ಬೌಂಡರಿ, 1 ಸಿಕ್ಸರ್) ಕೊಡುಗೆ ನೀಡಿದರು. ಕೊನೆಯಲ್ಲಿ ಮೊಹಮ್ಮದ್ ನವಾಜ್ 39 ರನ್, ಶಾದಾಬ್ ಖಾನ್ 32 ರನ್ ಗಳಿಸಿ ಪಾಕ್ ತಂಡ 280ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ನೆದರ್ಲ್ಯಾಂಡ್ಸ್ ಪರ ಬಾಸ್ ಡಿ ಲೀಡೆ 4 ವಿಕೆಟ್ ಕಿತ್ತರೆ, ಕಾಲಿನ್ ಅಕರ್ಮನ್ 2 ವಿಕೆಟ್ ಪಾಲ್ ವ್ಯಾನ್ ಮೀಕೆರೆನ್, ಆರ್ಯನ್ ದತ್, ಲೋಗನ್ ವ್ಯಾನ್ ಬೀಕ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.