ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಗುಡ್ಡಗಾಡು ಪ್ರದೇಶದಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರಲ್ಲಿ ಮೂವರು ಉಗ್ರರನ್ನು ಇಂದು (ಸೆ.16) ಭಾರತೀಯ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿತ್ತು. ನಂತರ ಬಾರಾಮುಲ್ಲಾ ಜಿಲ್ಲೆಯ ಉರಿ, ಹತ್ಲಂಗಾದ ಮುಂಚೂಣಿ ಪ್ರದೇಶದಲ್ಲಿ ಭಯೋತ್ಪಾದಕರು, ಸೇನೆ ನಡುವೆ ಎನ್‌ಕೌಂಟರ್ ಪ್ರಾರಂಭವಾಯಿತು. ಇದೀಗ ಈ ಗುಂಡಿನ ಕಾಳಗದಲ್ಲಿ ಮತ್ತೆ ಮೂರು ಉಗ್ರರ ಹತ್ಯೆಯಾಗಿದೆ ಎಂದು ಹೇಳಲಾಗಿದೆ.
ಈ ಕಾರ್ಯಚರಣೆಗೆ ಬಾರಾಮುಲ್ಲಾ ಪೊಲೀಸರು ಕೂಡ ಸಾಥ್ ನೀಡಿದ್ದಾರೆ. ಈ ಬಗ್ಗೆ ಎಕ್ಸ್ (ಹಿಂದಿನ ಟ್ವಿಟರ್) ನಲ್ಲೂ ಪೋಸ್ಟ್ ಮಾಡಲಾಗಿತ್ತು. ಇನ್ನು ಈ ಕಾರ್ಯಚಾರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಭಯೋತ್ಪಾದಕರ ಪತ್ತೆಗೆ ಡ್ರೋನ್ಗಳನ್ನು ಕೂಡ ಬಳಸಲಾಗುತ್ತಿದೆ.
ಅನಂತನಾಗ್ನಲ್ಲಿ ಮೂರು ದಿನಗಳಿಂದ ಕಾರ್ಯಚರಣೆ ನಡೆಯುತ್ತಿದ್ದು, ಗುಂಡಿನ ದಾಳಿಯಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಮತ್ತು ಡಿಎಸ್‌ಪಿ ಹುಮಾಯೂನ್ ಭಟ್ ಸೇರಿದಂತೆ ನಾಲ್ವರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ಕಾಳಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕೊಕರ್ನಾಗ್‌ನ ಗಡೋಲ್‌ನ ಅರಣ್ಯ ಪ್ರದೇಶದಲ್ಲಿ ಸೇರಿದಂತೆ ಅನೇಕ ಕಡೆ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.