ಪುತ್ತೂರು: ಬದುಕು ಮತ್ತು ಬದುಕಿನಾಚೆಯ ವಿಚಾರವನ್ನು ತಿಳಿಸಲು ಸಂಸೃತ ಬೇಕು. ಹಾಲನ್ನು ಕುದಿಸಿ, ಹೆಪ್ಪು ಹಾಕಿ, ಬೆಣ್ಣೆ ತೆಗೆದು, ಬೆಣ್ಣೆಯನ್ನು ತುಪ್ಪ ಮಾಡುವ ಕೆಲಸದಂತೆಯೇ ಸಂಸ್ಕೃತ ಕಲಿಯುವ ಕ್ರಮ. ಆ ತುಪ್ಪವೇ ಸಂಸ್ಕೃತ. ಸಂಸ್ಕೃತವನ್ನು ತೆರೆದ ಕಣ್ಣಿನಿಂದ ನೋಡಿ. ಇಂದಿನಿಂದ ನಾಲ್ಕು ಅಕ್ಷರ ಸಂಸ್ಕೃತ ಕಲಿಯುವ ಸಂಕಲ್ಪ ಮಾಡೋಣ ಎಂದು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ್ ಹೇಳಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಸಂಸ್ಕೃತ ದಿವಸ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ರಕ್ಷಾಬಂಧನ ಹಾಗೂ ಸಂಸ್ಕೃತ ಭಾಷೆ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೊಜ ಮಾತನಾಡಿ, ಭಾರತದ ಪ್ರಾಚೀನ ಹಾಗೂ ಅತ್ಯಂತ ಸಮೃದ್ಧ ಭಾಷೆ ಸಂಸ್ಕೃತ. ಸಂಸ್ಕೃತ ಶ್ಲೋಕ ಹೇಳುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ, ರಕ್ಷಣೆ ಸಿಗುತ್ತದೆ. ಸಂಸ್ಕೃತ ಭಾಷೆ ಎಂದಿಗೂ ನಾಶವಾಗಲಾರದು. ಪ್ರಪಂಚದಾದ್ಯಂತ ಸಂಸ್ಕೃತ ಶ್ಲೋಕಗಳು ಪಠಿಸಲ್ಪಡುತ್ತವೆ. ಶ್ಲೋಕ ಪಠಣದಿಂದ ಆರೋಗ್ಯ ಭಾಗ್ಯ ಲಭ್ಯವಾಗುವುದು ಎಂದರು.
ಅಂಬಿಕಾ ಪ.ಪೂ. ವಿದ್ಯಾಲಯ ನೆಲ್ಲಿಕಟ್ಟೆ ಉಪಪ್ರಾಚಾರ್ಯ ಶೈನಿ ಕೆ.ಜೆ. ಉಪಸ್ಥಿತರಿದ್ದರು. ಸಂಸ್ಕೃತ ಉಪನ್ಯಾಸಕ ಆದರ್ಶ ಗೋಖಲೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶ್ರೀಕರ ಶಗ್ರಿತ್ತಾಯ ಪ್ರಾರ್ಥಿಸಿದರು. ವಿಕೇಶ್ ಪ್ರಭು ಸ್ವಾಗತಿಸಿ, ವರಲಕ್ಷ್ಮಿವಂದಿಸಿದರು. ಪವನ್ ಮತ್ತು ಮಹತಿ ಕಾರ್ಯಕ್ರಮ ನಿರೂಪಿಸಿದರು.