ನವದೆಹಲಿ: ಕರ್ನಾಟಕದ ನಾಲ್ವರು ಸೇರಿ ಒಟ್ಟು 63 ಶಿಕ್ಷಕರಿಗೆ ನಿನ್ನೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು. ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೇಂದ್ರ ಸರ್ಕಾರದಿಂದ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.
ಕರ್ನಾಟಕದಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ಸರ್ಕಾರಿ ಪಿಯುಸಿ ಪ್ರೌಢಶಾಲಾ ವಿಭಾಗದ ಶಿಕ್ಷಕ ನಾರಾಯಣ ಪರಮೇಶ್ವರ ಭಾಗವತ್, ಬಾಗಲಕೋಟೆ ಕೆಎಲ್ಇ ಸೊಸೈಟಿಯ ಎಸ್ಇಪಿ ಜೂನಿಯರ್ ಕಾಲೇಜಿನ ಸಪ್ನಾ ಶ್ರೀಶೈಲ್ ಆನಿಗೋಳ, ಧಾರವಾಡ ಐಐಟಿ ಪ್ರಾಧ್ಯಾಪಕ ಡಾ.ಎಸ್.ಆರ್.ಮಹಾದೇವ ಪ್ರಸನ್ನ, ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಜೆ.ದಿನೇಶ್ ಬಾಬು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ರಾಷ್ಟ್ರಪತಿಯವರು, ಪ್ರತಿಯೊಬ್ಬರ ಬದುಕಿನಲ್ಲೂ ಪ್ರಾಥಮಿಕ ಶಿಕ್ಷಣ ಮಹತ್ವದ್ದು ಎಂದರು. ಬೋಧನೆಯಲ್ಲಿ ಮಹಿಳೆಯರ ಪಾತ್ರವನ್ನು ಗಮನಿಸಿ ಹೇಳುವುದಾದರೆ ಶಿಕ್ಷಕಿಯರಿಗೂ ಹೆಚ್ಚಿನ ಪ್ರಮಾಣದಲ್ಲಿ ಪ್ರಶಸ್ತಿ ಸಿಗಬೇಕು. ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡುವುದು ಮಹಿಳಾ ಸಬಲೀಕರಣದ ದೃಷ್ಟಿಯಿಂದ ಪ್ರಮುಖವಾದುದು ಎಂದು ಅವರು ಅಭಿಪ್ರಾಯಪಟ್ಟರು.