ನವದೆಹಲಿ: ಪ್ರಧಾನಿ ಮೋದಿಗೆ ಬೆಂಗಾವಲಾಗಿ ಸದಾ ಎಸ್‍ಪಿಜಿ ಎನ್ನುವ ಪಡೆ ಇರುವುದು ಕೆಲವರಿಗೆ ಗೊತ್ತಿರಬಹುದು. ಈ ಪಡೆ, ಮಾಜಿ ಪ್ರಧಾನಿಗಳ ರಕ್ಷಣೆಯ ಜವಾಬ್ದಾರಿಯನ್ನೂ ವಹಿಸುತ್ತದೆ. ಇದೀಗ ದುಃಖಕರ ಸುದ್ದಿಯೊಂದು ಬಂದಿದ್ದು, ಎಸ್‍ಪಿಜಿ ಪಡೆಯ ಮುಖ್ಯಸ್ಥರು ನಿಧನ ಹೊಂದಿದ್ದಾರೆ.
ವಿಶೇಷ ಸಂರಕ್ಷಣಾ ತಂಡದ (ಎಸ್ಪಿಜಿ) ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ಅವರು ಹರಿಯಾಣದ ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
2016ರಿಂದ ಎಸ್‍ಪಿಜಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ವಹಿಸಿದ್ದರು. ಅವರಿಗೆ ಇತ್ತೀಚೆಗೆ ಸೇವೆಯ ವಿಸ್ತರಣೆಯನ್ನು ನೀಡಲಾಗಿತ್ತು. 61 ವರ್ಷದ ಅಧಿಕಾರಿಯಾಗಿದ್ದ ಅವರು, ಕಳೆದ ಕೆಲವು ತಿಂಗಳುಗಳಿಂದ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.
ಸಿನ್ಹಾ ಅವರು 1987ರ ಬ್ಯಾಚ್‍ನ ಕೇರಳ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದರು. ಎಸ್‍ಪಿಜಿ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ಸಿನ್ಹಾ ಅವರು ಕೇರಳದ ಹೆಚ್ಚುವರಿ ವಿಶೇಷ ಸೇವೆ ಮತ್ತು ಸಂಚಾರ ಪೊಲೀಸ್ ಮಹಾನಿರ್ದೇಶಕರಾಗಿದ್ದರು.