ಜಮಖಂಡಿಯ ಕಂಕಣವಾಡಿ ಗ್ರಾಮದ ರೈತರಿಂದಲೇ ನಿರ್ಮಾಣವಾಯ್ತು ವಿಶೇಷ ಬ್ಯಾರಲ್‌ ಸೇತುವೆ

By: Ommnews

Date:

Share post:

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ರೈತರು ಒಂದು ವಿಶೇಷ ಸಾಧನೆ ಮಾಡಿದ್ದಾರೆ. ಸರ್ಕಾರವೇ ನಾಚುವಂತೆ ಯಾವ ಎಂಜಿನಿಯರ್‌ಗಳ ಸಹಾಯ ಇಲ್ಲದೇ ಸ್ವತಃ ತಾವೇ ಎಂಜಿನಿಯರ್‌ಗಳಾಗಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್ ಸೇತುವೆ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ.

Advertisement
Advertisement
Advertisement

ಈ ಬ್ಯಾರಲ್ ಸೇತುವೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 300 ಪ್ಲಾಸ್ಟಿಕ್ ಬ್ಯಾರೆಲ್‌ಗಳು, 15 ಟನ್ ಕಬ್ಬಿಣದ ಆ್ಯಂಗ್ಲರ್, 10 ಟನ್ ಕಟ್ಟಿಗೆ ಹಾಗೂ 10 ಟನ್‌ನಷ್ಟು ಪ್ಲಾಸ್ಟಿಕ್ ಹಗ್ಗದಿಂದ ನಿರ್ಮಾಣವಾಗುತ್ತಿದೆ.

ಕಂಕನವಾಡಿ ಗ್ರಾಮದಿಂದ ಸುಮಾರು 600 ಅಡಿ ದೂರದ ಗುಹೇಶ್ವರ ಗಡ್ಡೆಗೆ (ನಡುಗಡ್ಡೆ) ತೆರಳಲು ಜನ ಹಲವು ವರ್ಷಗಳಿಂದ ಬೋಟನ್ನೇ ಅವಲಂಬಿಸಿದ್ದರು. ಅಲ್ಲದೇ ಗುಹೇಶ್ವರ ನಡುಗಡ್ಡೆಯಲ್ಲಿ ಈ ರೈತರ ಸುಮಾರು 700 ಎಕರೆ ಜಮೀನು ಇದೆ. ರೈತರು ಹೊಲ, ಗದ್ದೆಗಳಿಗೆ ಹೋಗಲು, ದನಕರುಗಳನ್ನು ಕರೆದೊಯ್ಯಲು ಹಾಗೂ ತಾವು ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸಲು ಬೋಟನ್ನೇ ಅವಲಂಬಿಸಿದ್ದರು.

ಅಷ್ಟೇ ಅಲ್ಲದೇ ಆ ಗುಹೇಶ್ವರ ಗಡ್ಡೆಯಲ್ಲಿ ಪ್ರಖ್ಯಾತ ಗುಹೇಶ್ವರ ದೇವಸ್ಥಾನವಿದ್ದು, ಪ್ರತಿ ಅಮವಾಸ್ಯೆ ದಿನದಂದು ನೂರಾರು ಭಕ್ತಾದಿಗಳು ಬೋಟ್ ಮೂಲಕವೇ ದೇವಸ್ಥಾನಕ್ಕೆ ತೆರಳುವ ಪರಿಸ್ಥಿತಿ ಇತ್ತು. ಅದೇ ನಡುಗಡ್ಡೆಯ ಜಮೀನುಗಳಲ್ಲಿ ಮನೆ ಮಾಡಿಕೊಂಡು ಸುಮಾರು 150 ಕುಟುಂಬಗಳು ವಾಸಿಸುತ್ತಿವೆ. ಹೀಗಾಗಿ ನಡುಗಡ್ಡೆಯಿಂದ ಕಂಕನವಾಡಿಗೆ ಬರಲು, ಊರಿನಿಂದ ಗುಹೇಶ್ವರ ಗಡ್ಡೆ ತಲುಪಲು, ಜನ ಜೀವ ಕೈಯಲ್ಲೇ ಹಿಡಿದುಕೊಂಡು ಬೋಟ್ ಮೂಲಕವೇ ಕೃಷ್ಣಾ ನದಿಯನ್ನು ದಾಟಬೇಕಿತ್ತು.

ಇದರಿಂದಾಗಿ ನೊಂದ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಆ ಭಾಗದ ಜನಪ್ರತಿನಿಧಿಗಳಿಗೆ ನದಿಗೆ ಅಡ್ಡಲಾಗಿ ಮೇಲು ಸೇತುವೆ ಮಾಡಿಸಿಕೊಡಿ ಎಂದು ಮನವಿ‌ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಮನವಿಗೆ ಸ್ಪಂದನೆ ಸಿಗದೇ ಇದ್ದಾಗ ರೈತರು ಯಾರ ಸಹಾಯವೂ ಇಲ್ಲದೇ ಸೇತುವೆ ನಿರ್ಮಾಣಕ್ಕೆ ಕೈ ಹಾಕಿದರು.

ಜನರಿಂದಲೇ ದುಡ್ಡು:

ಗ್ರಾಮದ ರೈತರೆಲ್ಲ ಸೇರಿ, ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್‌ ಸೇತುವೆ ನಿರ್ಮಾಣ ಮಾಡುವ ತೀರ್ಮಾನ ಕೈಗೊಂಡರು. ಪ್ರತಿ ಎಕರೆಗೆ 1 ಸಾವಿರ ರೂ. ನಂತೆ ಗ್ರಾಮದ ಎಲ್ಲ ರೈತರಿಂದ ದೇಣಿಗೆ ಸಂಗ್ರಹಿಸಲಾಯಿತು. ನಂತರ ಸಂಗ್ರಹವಾದ ಹಣದಿಂದ ನದಿಗೆ ಸೇತುವೆ ನಿರ್ಮಿಸುವ ಕೆಲಸ ಆರಂಭಿಸಿದರು. ಸದ್ಯ ಸೇತುವೆ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ರೈತರ ಒಂದೂವರೆ ತಿಂಗಳ ನಿರಂತರ ಪರಿಶ್ರಮದಿಂದ ಈ ಸೇತುವೆ ನಿರ್ಮಾಣವಾಗುತ್ತಿದ್ದು, ರೈತರ ಈ ವಿಶೇಷ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಂತ್ರಜ್ಞರು, ಸರ್ಕಾರ ಹಾಗೂ ಸಂಘಸಂಸ್ಥೆ ಹೀಗೆ ಯಾರ ಸಹಾಯವೂ ಇಲ್ಲದೇ ನದಿಗೆ ಅಡ್ಡಲಾಗಿ ಸೇತುವೆ ಮಾಡುತ್ತಿರುವ ಈ ರೈತರ ಛಲ ಹಾಗೂ ಸಾಹಸ ನಿಜಕ್ಕೂ ಅಸಾಮಾನ್ಯ ಸಾಧನೆಯೇ ಸರಿ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section