ಭೋಪಾಲ್, ಸೆಪ್ಟೆಂಬರ್ 16: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದ ನಡುವೆಯೇ ಕೃತಕ ಬುದ್ಧಿಮತ್ತೆಯ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದಿದೆ. ಜಬಲ್‌ಪುರದಲ್ಲಿ ಇತ್ತೀಚಿನ ಪ್ರಕರಣ ಬೆಳಕಿಗೆ ಬಂದಿದ್ದು, ಶಾಸಕ ಮತ್ತು ಮಾಜಿ ರಾಜ್ಯ ಸಚಿವರ ಬೈಗುಳ ಆಡಿಯೊವನ್ನು AI ಬಳಸಿ ಕ್ಲೋನ್ ಮಾಡಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ.
ಆಡಿಯೊದಲ್ಲಿ, ಇಬ್ಬರು ನಾಯಕರು ಫೋನ್‌ನಲ್ಲಿ ಕಾರ್ಯಕರ್ತನೊಂದಿಗೆ ಮಾತನಾಡುವಾಗ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಆಡಿಯೋ ವೈರಲ್ ಆದ ನಂತರ ವಿಷಯ ಪೊಲೀಸರಿಗೆ ತಲುಪಿತ್ತು. ಈ ಆಡಿಯೊ ಬಗ್ಗೆ ತನಿಖೆಗೆ ನಡೆಸಬೇಕು ಎಂದು ಇಬ್ಬರು ನಾಯಕರು ಒತ್ತಾಯಿಸಿದ್ದಾರೆ. ಆದಾಗ್ಯೂ, ವೈರಲ್ ಆಗುತ್ತಿರುವ ಆಡಿಯೊದಲ್ಲಿ ಮಾತನಾಡುತ್ತಿರುವ ಮಾತುಗಳು ಮತ್ತು ಸಾಲುಗಳು ಬಹುತೇಕ ಒಂದೇ ಆಗಿದ್ದು, ಧ್ವನಿಯಲ್ಲಿ ವ್ಯತ್ಯಾಸವಿದೆ.
ಕಾಂಗ್ರೆಸ್ ಶಾಸಕ ವಿನಯ್ ಸಕ್ಸೇನಾ ಮತ್ತು ಉತ್ತರ ಮಧ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಶರದ್ ಜೈನ್ ಅವರ ದನಿಯಲ್ಲಿರುವ ಆಡಿಯೊ ವೈರಲ್ ಆಗಿದೆ ಎರಡೂ ಆಡಿಯೊ ಕ್ಲಿಪ್‌ಗಳನ್ನು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪಕ್ಷದ ನಾಯಕರು ಮತ್ತು ಸಚಿವರು ಪಕ್ಷದ ಕಾರ್ಯಕರ್ತರೊಂದಿಗೆ ಹೇಗೆ ಮತ್ತು ಯಾವ ಸ್ವರದಲ್ಲಿ ಮಾತನಾಡುತ್ತಾರೆ ಎಂಬುದನ್ನು ಕೇಳಿ ಎಂಬ ಬರಹದೊಂದಿದೆ ಈ ಆಡಿಯೊವನ್ನು ಹಂಚಿಕೊಳ್ಳಲಾಗಿದೆ.
ಇದು ನಮ್ಮ ದನಿಯಲ್ಲ ಎಂದ ನಾಯಕರು
ವೈರಲ್ ಆದ ಆಡಿಯೊ ಕ್ಲಿಪ್‌ನಲ್ಲಿರುವುದು ನನ್ನ ಧ್ವನಿಯಲ್ಲ ಎಂದು ಕಾಂಗ್ರೆಸ್ ಶಾಸಕ ವಿನಯ್ ಸಕ್ಸೇನಾ ಹೇಳಿದ್ದಾರೆ. ಇದು ಮಾನಹಾನಿ ಮಾಡುವ ಪ್ರಯತ್ನ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಕೃತ್ಯ ಎಸಗಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸಕ್ಸೇನಾ ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ರಾಜ್ಯ ಸಚಿವ ಶರದ್ ಜೈನ್ ಕೂಡ ಆಡಿಯೊದಲ್ಲಿರುವ ದನಿ ನನ್ನದಲ್ಲ. ಇದು ರಾಜಕೀಯ ಪೈಪೋಟಿ ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ.