ಕೊಲಂಬೊ: ನಾಕೌಟ್ ಪಂದ್ಯದಲ್ಲಿ ಪಾಕಿಸ್ತಾನ , ಶ್ರೀಲಂಕಾ ವಿರುದ್ಧ ಸೋತಿದ್ದರಿಂದ ಎಲ್ಲರೂ ಪಾಕ್ ತಂಡವನ್ನ ಟೀಕಿಸುತ್ತಿದ್ದರು. ಆದ್ರೆ ಭಾರತ ಬಾಂಗ್ಲಾದೇಶದ ವಿರುದ್ಧ ಸೋತಿದ್ದು ನನಗೆ ಮತ್ತು ಪಾಕಿಸ್ತಾನ ತಂಡಕ್ಕೆ ಸಮಾಧಾನ ತರಿಸಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಶುಕ್ರವಾರ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತ್ತು. 266 ರನ್‌ಗಳ ಗುರಿ ಬೆನ್ನತ್ತಿದ ಭಾರತ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್ ಆಗುವ ಮೂಲಕ 6 ರನ್‌ಗಳ ವಿರೋಚಿತ ಸೋಲನುಭವಿಸಿತು. ಟೂರ್ನಿಯಲ್ಲಿ ಈಗಾಗಲೇ ಭಾರತ ಫೈನಲ್ ತಲುಪಿಯಾಗಿದೆ. ಹೀಗಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಅಂತಿಮ ಸೂಪರ್-4 ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ಎದುರು 6 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
ಈ ಕುರಿತು ಪಾಕಿಸ್ತಾನ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ ಅಖ್ತರ್, ನಾಕೌಟ್ ಪಂದ್ಯದಲ್ಲಿ ಶ್ರೀಲಂಕಾ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಎಚ್ಚರಿಕೆಯ ಗಂಟೆ ನೀಡಿದೆ. ಕೆಲವು ಪಂದ್ಯಗಳನ್ನು ಗೆದ್ದ ಮಾತ್ರಕ್ಕೆ ಉಳಿದ ತಂಡಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನ ಬಾಂಗ್ಲಾದೇಶ ಸಾಬೀತು ಮಾಡಿದೆ ಎಂದಿದ್ದಾರೆ.