ಮುಂಬೈ: ವಿರೋಧ ಪಕ್ಷಗಳ ಮೈತ್ರಿ ಕೂಟ INDIA (ಇಂಡಿಯಾ) ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.
ಶನಿವಾರ ಮುಂಬೈನಲ್ಲಿ ಐಎನ್‌ಡಿಐಎ (ಇಂಡಿಯಾ) ಒಕ್ಕೂಟದ ಉನ್ನತಮಟ್ಟದ ಸಭೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.
ಮೈತ್ರಿಕೂಟದ ಪಕ್ಷಗಳು 2024ರ ಲೋಕಸಭಾ ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಟ್ಟಿಗೆ ಸ್ಪರ್ಧಿಸುವುದಾಗಿ ಹೇಳಿವೆ ಎಂದರಲ್ಲದೇ, ಕೆಲವು ರಾಜ್ಯಗಳಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಫೋಟಗೊಳ್ಳುತ್ತಿದೆ ಅನ್ನೋದು ಊಹಾಪೋಹ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ದೇಶದ ಆರ್ಥಿಕತೆಯು ಅಪಾಯದಲ್ಲಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ. ಈ ನಡುವೆ ಚೀನಾದ ಅತಿಕ್ರಮಗಳ ಮೇಲೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು, ದೇಶದ ಭದ್ರತೆಗೂ ಅಪಾಯವನ್ನುಂಟು ಮಾಡುವ ಸನ್ನಿವೇಶ ತಂದೊಡ್ಡಿದೆ. ಆದರೆ ಕೇಂದ್ರ ಅಮೃತಕಾಲ್ ಹಾಗೂ 3ನೇ ಅತಿದೊಡ್ಡ ಆರ್ಥಿಕ ದೇಶ ಎಂಬ ಖಾಲಿ ಘೋಷಣೆಗಳನ್ನ ಮಾಡುತ್ತ ನೈಜ ಸಮಸ್ಯೆಗಳಿಂದ ಗಮನವನ್ನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗಳ ಸಿದ್ಧತೆ ಬಗ್ಗೆಯೂ ಚರ್ಚಿಸಲಾಯಿತು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಕೇಂದ್ರ ಸಚಿವರಾದ ಪಿ. ಚಿದಂಬರಂ ಮತ್ತು ಜೈರಾಮ್ ರಮೇಶ್, ಶಶಿ ತರೂರ್, ಸಚಿನ್ ಪೈಲಟ್, ಗೌರವ್ ಗೊಗೊಯ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.