
ಬುಡಾಪೆಸ್ಟ್: ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ಷಿಪ್ ಎರಡರಲ್ಲೂ ಸ್ವರ್ಣ ಪದಕ ಗೆದ್ದ 2ನೇ ಭಾರತೀಯ ಎನಿಸುವ ಹಂಬಲದಲ್ಲಿರುವ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಶುಕ್ರವಾರ ನಡೆಯಲಿರುವ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಕನ್ನಡಿಗ ಮನು ಡಿ.ಪಿ. ಕೂಡ ನೀರಜ್ ಜತೆಗೆ ಸ್ಪರ್ಧೆಗಿಳಿಯಲಿದ್ದಾರೆ. ಶೂಟರ್ ಅಭಿನವ್ ಬಿಂದ್ರಾ ಒಲಿಂಪಿಕ್ಸ್-ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರಾಗಿದ್ದಾರೆ.
ಕಳೆದ ಆವೃತ್ತಿಯಲ್ಲಿ ಗೆದ್ದಿದ್ದ ರಜತವನ್ನು ಸ್ವರ್ಣ ಪದಕವಾಗಿ ಬದಲಾಯಿಸುವತ್ತ 25 ವರ್ಷದ ನೀರಜ್ ದೃಷ್ಟಿ ನೆಟ್ಟಿದ್ದಾರೆ. ಜತೆಗೆ ಮೊದಲ ಬಾರಿಗೆ 90 ಮೀ. ಗಡಿಯನ್ನು ದಾಟುವ ಹಂಬಲದಲ್ಲಿದ್ದಾರೆ. ಕಳೆದ ವರ್ಷ ಡೈಮಂಡ್ ಲೀಗ್ನಲ್ಲಿ 89.94 ಮೀ. ಎಸೆದಿದ್ದು ಅವರ ಗರಿಷ್ಠ ದೂರದ ಎಸೆತವಾಗಿದೆ. ಜೂನ್ 30ರ ಲಾಸನ್ನೆ ಡೈಮಂಡ್ ಲೀಗ್ ಬಳಿಕ 25 ವರ್ಷದ ನೀರಜ್ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ. ಗಾಯದಿಂದಾಗಿ 2 ತಿಂಗಳು ವಿಶ್ರಾಂತಿ ಪಡೆದ ಬಳಿಕ ಮರಳಿ ಕಣಕ್ಕಿಳಿಯುತ್ತಿರುವ ನೀರಜ್ಗೆ ಜೆಕ್ ಗಣರಾಜ್ಯದ ಜೇಕಬ್ ವಡ್ಲೆಜ್, ಜರ್ಮನಿಯ ಜೂಲಿಯನ್ ವೆಬರ್, ಹಾಲಿ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದಾರೆ.
ಕಳೆದ ಏಷ್ಯನ್ ಚಾಂಪಿಯನ್ಷಿಪ್ ರಜತ ಪದಕ ಗೆದ್ದಿದ್ದ 23 ವರ್ಷದ ಮನುಗೆ ಕನ್ನಡಿಗರೇ ಆದ ಕಾಶಿನಾಥ್ ನಾಯ್ಕ್ ಕೋಚ್ ಆಗಿದ್ದಾರೆ. ಸೈನಿಕರಾಗಿರುವ ಮನು, ಗರಿಷ್ಠ 84.35 ಮೀ. ಎಸೆತದ ದಾಖಲೆ ಹೊಂದಿದ್ದಾರೆ. ಶುಕ್ರವಾರ ಅರ್ಹತಾ ಸುತ್ತಿನ ಸ್ಪರ್ಧೆಗಳು, ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.40ಕ್ಕೆ ಆರಂಭಗೊಳ್ಳಲಿದೆ. ಬಳಿಕ ಜಾವೆಲಿನ್ ಸ್ಪರ್ಧೆಯ ಫೈನಲ್ ಸ್ಪರ್ಧೆ ಭಾನುವಾರ ರಾತ್ರಿ 11.50ರಿಂದ ನಡೆಯಲಿದೆ. ಮೊಬೈಲ್ನಲ್ಲಿ ಜಿಯೋ ಸಿನಿಮಾ ಆ್ಯಪ್ ಮತ್ತು ಟಿವಿಯಲ್ಲಿ ಸ್ಪೋರ್ಟ್ಸ್18 ಚಾನಲ್ನಲ್ಲಿ ಸ್ಪರ್ಧೆಯನ್ನು ಉಚಿತವಾಗಿ ವೀಸಬಹುದು.