ಶ್ರೀನಗರ: ಸೇನಾ ಘಟಕದ ಕಾವಲಿಗೆ ನೇಮಿಸಿದ್ದ ಅಗ್ನಿವೀರರೊಬ್ಬರು ಗುಂಡಿನ ಗಾಯಗಳಿಂದ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ಸಂಭವಿಸಿದೆ.
ಅಗ್ನಿವೀರನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿಲ್ಲ. ಅಗ್ನಿವೀರ್‌ಗೆ ಹೇಗೆ ಗುಂಡು ತಗುಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆತನ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿಸಲ್ಪಟ್ಟಿದೆಯೇ? ಅಥವಾ ಆತ್ಮಹತ್ಯೆಯೇ? ಅಥವಾ ಘಟಕದೊಳಗೆ ಇದ್ದ ಬೇರೆಯ ಸಿಬ್ಬಂದಿಯಿಂದ ಗುಂಡು ಹಾರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆಯ ವೇಳೆಗೆ ಸೇನಾ ಘಟಕದಲ್ಲಿದ್ದ ಇತರರು ಗುಂಡಿನ ಶಬ್ದ ಕೇಳಿ ಹೊರಗೆ ಬಂದಾಗ ಅಗ್ನಿವೀರ ಗಾಯಗೊಂಡು ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.