ನವದೆಹಲಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಹುತೇಕ ಕಾರ್ಯ ಮುಗಿದಿದ್ದು, ಮುಕ್ತಾಯ ಹಂತದ ಕೆಲಸಗಳು ಬರದಿಂದ ಸಾಗುತ್ತಿವೆ. ಈ ಮಧ್ಯೆ ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ಮಾಡುವ ಗರ್ಭಗುಡಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಲಾಗುವ ಗರ್ಭಗುಡಿಯೂ ನಿರ್ಮಾಣ ಕಾರ್ಯ ಮುಗಿದಿದ್ದು, ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್ ಫಿಟ್ ಮಾಡುವ ಕೆಲಸಗಳು ಕೂಡ ನಡೆದವು. ರಾಮಲಲ್ಲಾನ ಗರ್ಭಗುಡಿ ಕೆಲ ಫೋಟೋಗಳು ನಿಮಗಾಗಿ ಎಂದು ಬರೆದುಕೊಂಡಿದ್ದಾರೆ.
ರಾಮಜನ್ಮಭೂಮಿ ದೇಗುಲದಲ್ಲಿ 5 ವರ್ಷದ ಮಗುವಿನ ರೂಪದ ಶ್ರೀರಾಮ 4’3 ಅಡಿಯ ಎತ್ತರದ ಪ್ರತಿಮೆಯನ್ನು ದೇಗುಲದ ಮೂರು ಪ್ರದೇಶಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೂರು ಕಡೆಯೂ ಮೂವರು ಬೇರೆ ಬೇರೆ ಶಿಲ್ಪಿಗಳು ಬೇರೆ ಬೇರೆ ಕಲ್ಲಿನಿಂದ ಈ ಪ್ರತಿಮೆಯ ಕೆತ್ತನೆ ಕಾರ್ಯ ಮಾಡುತ್ತಿದ್ದಾರೆ. ಅದರಲ್ಲಿ ಒಂದು ಪ್ರತಿಮೆಯನ್ನು ದೇವರು ಸ್ವೀಕರಿಸುತ್ತಾರೆ. ಈ ಎಲ್ಲಾ ಪ್ರತಿಮೆಗಳು ಶೇಕಡಾ 90 ರಷ್ಟು ಪೂರ್ಣಗೊಂಡಿವೆ. ಅಂತಿಮ ಕೆಲಸ ಮುಗಿಸಲು ಒಂದು ವಾರ ಹಿಡಿಯಲಿದೆ ಎಂದು ಚಂಪತ್ ರಾಯ್ ಹೇಳಿದ್ದಾರೆ ಎಂದು ನ್ಯೂಸ್ ಏಜೆನ್ಸಿ ಎಎನ್ಐ ವರದಿ ಮಾಡಿದೆ.
ಪ್ರತಿಮೆಯನ್ನು ನೆಲ ಮಹಡಿಯಲ್ಲಿರುವ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲಾಗುವುದು. ನೆಲಮಹಡಿಯ ಗರ್ಭಗೃಹ ಬಹುತೇಕ ಸಿದ್ಧಗೊಂಡಿದೆ. ಹೀಗಾಗಿ ಪ್ರಾಣ ಪ್ರತಿಷ್ಠಾಪನೆಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ಹೇಳಿದ್ದಾರೆ.