ಮುಂಬೈ: ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನದ ವಿರುದ್ಧ 3 ವಿಕೆಟ್‌ಗಳ ಅಮೋಘ ಜಯ ಸಾಧಿಸಿದ್ದು, ವಿಶ್ವಕಪ್ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ 46.5 ಓವರ್‌ಗಳಲ್ಲೇ 293 ರನ್ ಗಳಿಸಿ ಜಯ ಸಾಧಿಸಿತು.
ಆಸ್ಟ್ರೇಲಿಯಾ ಆರಂಭದಲ್ಲೇ ಎಡವಿತು, ಪವರ್ ಪ್ಲೇ ಮುಗಿಯುವಷ್ಟರಲ್ಲೇ 52 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆ ನಂತರವೂ ಆಫ್ಘನ್ ಬೌಲರ್‌ಗಳು ಬೆಂಬಿಡದೇ ಆಸೀಸ್ ಮೇಲೆ ತಮ್ಮ ಪರಾಕ್ರಮ ಮುಂದುವರಿಸಿ 39 ರನ್‌ಗಳ ಅಂತರದಲ್ಲೇ ಇನ್ನೂ 7 ವಿಕೆಟ್‌ಗಳನ್ನ ಉಡೀಸ್ ಮಾಡಿದ್ದರು. ಇದು ಆಸ್ಟ್ರೇಲಿಯಾಗೆ ದೊಡ್ಡ ಆಘಾತವಾಯಿತು. ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ಟ್ರಾವಿಸ್ ಹೆಡ್, ಜೋಸ್ ಇಂಗ್ಲಿಸ್ ಶೂನ್ಯ ಸುತ್ತಿದ್ದರು. ಡೇವಿಡ್ ವಾರ್ನರ್ 18 ರನ್, ಮಿಚೆಲ್ ಮಾರ್ಚ್ 24 ರನ್, ಮಾರ್ನಸ್ ಲಾಬುಶೇನ್ 14 ರನ್, ಮಾರ್ಕಸ್ ಸ್ಟೋಯ್ನಿಸ್ 6 ರನ್, ಮಿಚೆಲ್ ಸ್ಟಾರ್ಕ್ 3 ರನ್‌ಗಳಿಗೆ ವಿಕೆಟ್ ಕೈಚೆಲ್ಲಿದರು.
ಇದರಿಂದ ಆಸ್ಟ್ರೇಲಿಯಾ ತಂಡದ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಮ್ಯಾಕ್ಸ್‌ವೆಲ್ ಏಕಾಂಗಿ ಹೋರಾಟದಿಂದ ಆಸೀಸ್ ತಂಡ ಅಮೋಘ ಜಯ ಸಾಧಿಸಿತು. ಮುರಿಯದ 8ನೇ ವಿಕೆಟ್‌ಗೆ ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಜೋಡಿ 170 ಎಸೆತಗಳಲ್ಲಿ 202 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ತಡ ಸೇರಿಸಿದರು. ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ 201 ರನ್ (10 ಸಿಕ್ಸರ್, 21 ಬೌಂಡರಿ) ಬಾರಿಸಿದ್ರೆ, ಪ್ಯಾಟ್ ಕಮ್ಮಿನ್ಸ್ 12 ರನ್ ಗಳಿಸಿ ಅಜೇಯರಾಗುಳಿದರು.
ಅಫ್ಘಾನಿಸ್ತಾನ ಪರ ನವೀನ್-ಉಲ್-ಹಕ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್ ತಲಾ 2 ವಿಕೆಟ್ ಕಿತ್ತರು.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಒಂದೆಡೆ ವಿಕೆಟ್ ಕಳೆದುಕೊಂಡರೂ ಜವಾಬ್ದಾರಿಯುತ ರನ್ ಕಲೆಹಾಕುತ್ತಾ ಸಾಗಿತು. ಆದ್ರೆ ಕೊನೆಯಲ್ಲಿ ರಶೀದ್ ಖಾನ್ ಮತ್ತು ಜದ್ರಾನ್ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ ತಂಡದ ಮೊತ್ತ 300ರ ಗಡಿ ಸಮೀಪಿಸಿತು. ಅಫ್ಘಾನಿಸ್ತಾನದ ಪರ ಇಬ್ರಾಹಿಂ ಜದ್ರಾನ್ 129 ರನ್ (143 ಎಸೆತ, 3 ಸಿಕ್ಸರ್, 8 ಬೌಂಡರಿ), ರಶೀದ್ ಖಾನ್ 35 ರನ್ (18 ಎಸೆತ, 3 ಸಿಕ್ಸರ್, 2 ಬೌಂಡರಿ ಗಳಿಸಿ ಅಜೇಯರಾಗಿ ಉಳಿದರೆ, ರಹಮಾನುಲ್ಲಾ ಗುರ್ಬಾಜ್ 21 ರನ್. ರಹಮತ್ ಶಾ 30 ರನ್, ಹಸ್ಮತುಲ್ಲಾ ಶಾಹಿದಿ 26 ರನ್, ಅಜ್ಮತುಲ್ಲಾ ಒಮರ್ಜಾಯ್ 22 ರನ್, ಮೊಹಮ್ಮದ್ ನಬಿ 12 ರನ್ ಗಳಿಸಿ ಔಟಾದರು.
ಆಸೀಸ್ ಪರ 9 ಓವರ್‌ನಲ್ಲಿ 70 ರನ್ ಬಿಟ್ಟುಕೊಟ್ಟ ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ 2 ವಿಕೆಟ್, ಗ್ಲೇನ್ ಮ್ಯಾಕ್ಸ್‌ವೆಲ್ ಮತ್ತು ಆಡಂ ಝಂಪಾ ತಲಾ ಒಂದೊಂದು ವಿಕೆಟ್ ಪಡೆದರು.