ನವ ದೆಹಲಿ: ಅಜ್ಮಲ್ ಹೊಸೈನ್ ಶಾಂಟೊ (90) ಹಾಗೂ ನಾಯಕ ಶಕಿಬ್ ಅಲ್ ಹಸನ್ (82) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧ 3 ವಿಕೆಟ್ಗಳ ಗೆಲುವು ಸಾಧಿಸಿದೆ.
ಅರುಣ್ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕಿಬ್ ಅಲ್ ಹಸನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 49.3 ಓವರ್ಗಳಲ್ಲಿ 279 ರನ್ ಬಾರಿಸಿತು. ಇದಕ್ಕೆ ಪ್ರತಿಯಾಗಿ ಆಡಿದ ಬಾಂಗ್ಲಾ ಹುಲಿಗಳು ಇನ್ನೂ 53 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ ಕಳೆದುಕೊಂಡು 282 ರನ್ ಬಾರಿಸಿ ಜಯ ಸಾಧಿಸಿತು.
ಲಂಕಾ ತಂಡ ಬ್ಯಾಟಿಂಗ್ನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಸತತವಾಗಿ ವಿಕೆಟ್ ಕಳೆದುಕೊಳ್ಳುವ ಮೂಲಕ ಎದುರಾಳೀ ತಂಡದ ಬೌಲರ್ಗಳಿಗೆ ಭರ್ಜರಿ ಮುನ್ನಡೆ ಪಡೆಯಲು ಅನುಕೂಲ ಮಾಡಿಕೊಟ್ಟರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಚರಿತ್ ಅಸಲಂಕಾ(108 ರನ್) ಉತ್ತಮವಾಗಿ ಬ್ಯಾಟ್ ಬೀಸುವ ಮೂಲಕ ತಂಡಕ್ಕೆ ಆಧಾರವಾದರು. ಅವರ ಶತಕದ ನೆರವಿನಿಂದ ಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು. ಸದೀರ ಸಮರ ವಿಕ್ರಮ 41 ರನ್ ಬಾರಿಸಿದರೆ, ಧನಂಜಯ ಡಿಸಿಲ್ವಾ 34 ರನ್ ರನ್ ಬಾರಿಸಿದರು.
ಬಾಂಗ್ಲಾದೇಶದ ಪರ ತಂಜಿಮ್ ಹಸನ್ 3 ವಿಕೆಟ್ ಪಡೆದರೆ ಶೊರಿಫುಲ್ ಇಸ್ಲಾಂ ಮತ್ತು ಶಕಿಬ್ ಅಲ್ ಹಸನ್ ತಲಾ ಒಂದು ವಿಕೆಟ್ ಉರುಳಿಸಿದರು.
ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಲಂಕಾ ಬಾಂಗ್ಲಾದೇಶ ತಂಡ 66 ರನ್ಗಳಿಗೆ ಮೊದಲೆರಡು ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ ಆ ಬಳಿಕ ಶಾಂಟೊ ಹಾಗೂ ಶಕಿಬ್ ಶತಕದ ಜತೆಯಾಟವಾಡಿದರು. ಮಹಮದುಲ್ಲಾ 22 ರನ್ ಬಾರಿಸಿದರೆ ಕೊನೆಯಲ್ಲಿ ತೌಹಿದ್ 15 ರನ್ ಕೊಡುಗೆ ಕೊಟ್ಟರು.