ಮಡಿಕೇರಿ:ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯ ಭಾಗದ ಮನೆಯೊಂದರಲ್ಲಿದ್ದ ವೃದ್ಧ ಮಹಿಳೆಯ ಮೇಲೆ ಹಲ್ಲೆ ಮಾಡಿ ದರೋಡೆ ನಡೆಸಿದ ಘಟನೆ ನಡೆದು ಹನ್ನೆರಡು ಗಂಟೆ ಕಳೆಯುವಷ್ಟರಲ್ಲೆ, ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ರಾಜಸ್ಥಾನ ಮೂಲದ ವಿಕಾಸ್ ಜೋರ್ಡಿಯಾ (33) ಎಂದು ಗುರುತಿಸಲಾಗಿದ್ದು, ಈತನ ಬಳಿಯಲ್ಲಿದ್ದ 27 ಗ್ರಾಂನ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಐಡಿಬಿಐ ಬ್ಯಾಂಕ್ ಮುಂಭಾಗದ ಮನೆಯ ನಿವಾಸಿ, ಬಿ.ಇ.ಸಾಕಮ್ಮ ಪ್ರಭಾಕರ ಎಂಬವರ ಮೇಲೆ ಭಾನುವಾರ ಸಂಜೆ ಸುಮಾರು 6 ಗಂಟೆಯ ಹೊತ್ತಿಗೆ, ಮನೆಗೆ ಹಿಂಭಾಗದಿಂದ ಅಕ್ರಮವಾಗಿ ಪ್ರವೇಶಿಸಿದ ಆರೋಪಿ, ಸಾಕಮ್ಮ ಅವರ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಹಾಗೂ ಉಂಗುರವನ್ನು ದರೋಡೆ ಮಾಡಿದ್ದ.
ಪ್ರಕರಣವನ್ನು ಭೇದಿಸುವಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಎಸ್‌ಪಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.