ಮುಂಬೈ : ವಾಂಖೆಡೆ ಸ್ಟೇಡಿಯಂ ನಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಅಬ್ಬರಕ್ಕೆ ನಲುಗಿ ಹೋದ ಶ್ರೀಲಂಕಾ ವಿಶ್ವಕಪ್ ಆಸೆ ಕೈಬಿಟ್ಟಿತು. 302 ರನ್‌ಗಳ ದಾಖಲೆಯ ಜಯ ಸಾಧಿಸಿದ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಮಾತ್ರವಲ್ಲದೆ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.
ಭಾರತ ತಂಡ ನೀಡಿದ 358 ರನ್ ಗಳ ದೊಡ್ಡ ಮೊತ್ತ ಬೆನ್ನಟ್ಟಿದ್ದ ಲಂಕಾ ಆರಂಭದಿಂದಲೇ ಭಾರತದ ವೇಗಿಗಳ ದಾಳಿ ತಡೆಯಲಾಗದೆ ಒಬ್ಬರಾದ ಬಳಿಕ ಒಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. 14ಕ್ಕೆ 6 ವಿಕೆಟ್ ಕಳೆದುಕೊಂಡ ಲಂಕಾ ಕೊನೆಗೂ 55 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. 9.4 ಓವರ್ ಗಳಲ್ಲಿ 55 ರನ್ ಗಳಿಗೆ ಆಲೌಟಾಯಿತು.
ಮೊಹಮ್ಮದ್ ಶಮಿ 5 ಓವರ್ ಎಸೆದು 1 ಮೇಡನ್ ಸಹಿತ 18 ರನ್ ನೀಡಿ 5 ವಿಕೆಟ್ ಕಬಳಿಸಿ ತಂಡದಲ್ಲಿ ತನ್ನ ಸಾಮರ್ಥ್ಯ ಮೆರೆದರು.
ಸಿರಾಜ್ ಕೂಡ ಘಾತಕ ದಾಳಿ ನಡೆಸಿ 3 ವಿಕೆಟ್ ಕಿತ್ತು ಲಂಕಾ ತಂಡಕ್ಕೆ ಆರಂಭದಲ್ಲೇ ತಲೆ ಎತ್ತದಂತೆ ಮಾಡಿದರು. ಬುಮ್ರಾ ಒಂದು ವಿಕೆಟ್ ಪಡೆದರು. ಕೊನೆಯಲ್ಲಿ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.
ಕೊನೆಯಲ್ಲಿ ಬಂದ ಮಹೇಶ್ ತೀಕ್ಷಣ ಔಟಾಗದೆ 12, ಕಸುನ್ ರಜಿತಾ 14 ಮತ್ತು ದಿಲ್ಶನ್ ಮಧುಶನಕ 5 ರನ್ ಗಳಿಸಿ ಹೀನಾಯ ದಾಖಲೆ ನಿರ್ಮಾಣವಾಗದಂತೆ ತಡೆದರು. ಏಂಜೆಲೊ ಮ್ಯಾಥ್ಯೂಸ್12 ರನ್ ಗಳಿಸಿ ಔಟಾದರು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಭಾರತ ತಂಡ ನಾಯಕ ರೋಹಿತ್ ಶರ್ಮ 4 ರನ್ ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ಆ ಬಳಿಕ ಗಿಲ್ ಮತ್ತು ಕೊಹ್ಲಿ ಅಮೋಘ ಜತೆಯಾಟವಾಡಿದರು. ಅತ್ಯಮೋಘ ಆಟವಾಡಿದ ಗಿಲ್ ಶತಕದ ಹೊಸ್ತಿಲಲ್ಲಿ ಎಡವಿದರು. 92 ಎಸೆತಗಳಲ್ಲಿ 92 ರನ್ ಗಳಿಸಿದ್ದ ವೇಳೆ ದಿಲ್ಶನ್ ಮಧುಶನಕ ಎಸೆದ ಚೆಂಡನ್ನು ಕುಸಲ್ ಮೆಂಡಿಸ್ ಕೈಗಿತ್ತು ಭಾರೀ ನಿರಾಶರಾದರು. ಕೊಹ್ಲಿ 88 ರನ್ ಗಳಿಸಿದ್ದ ವೇಳೆ ಔಟ್ ಮಾಡುವಲ್ಲಿ ಮಧುಶನಕ ಯಶಸ್ವಿಯಾದರು.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ 56 ಎಸೆತಗಳಲ್ಲಿ 82 ರನ್ ಗಳಿಸಿ ಔಟಾದರು. 6 ಭರ್ಜರಿ ಸಿಕ್ಸರ್ ಮತ್ತು 3 ಬೌಂಡರಿ ಬಾರಿಸಿದ್ದರು. ಕೆಎಲ್ ರಾಹುಲ್21, ಸೂರ್ಯಕುಮಾರ್ ಯಾದವ್ 12 , ರವೀಂದ್ರ ಜಡೇಜಾ 35, ಮೊಹಮ್ಮದ್ ಶಮಿ 2 ರನ್ ಗಳಿಸಿ ಔಟಾದರು. 50 ಓವರ್ ಗಳಲ್ಲಿ8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು.
ಲಂಕಾ ವೇಗಿ ಮಧುಶನಕ ದುಬಾರಿ ಎನಿಸಿದರೂ 10 ಓವರ್ ಗಳಲ್ಲಿ 80 ರನ್ ನೀಡಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.