ಪುಣೆ: ಸೋಮವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಮೋಘ ನಿರ್ವಹಣೆ ತೋರಿದ ಅಫ್ಘಾನಿಸ್ಥಾನ ತಂಡ ಶ್ರೀಲಂಕಾ ವಿರುದ್ಧ ಜಯವನ್ನು ತನ್ನದಾಗಿಸಿಕೊಂಡಿದೆ.
ಅಫ್ಘಾನಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೀಲಂಕಾ 49.3 ಓವರ್ ಗಳಲ್ಲಿ 241 ರನ್‌ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಅಫ್ಘಾನ್ ತಂಡ 45.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿ ಜಯಭೇರಿ ಬಾರಿಸಿತು.
ರಹಮಾನುಲ್ಲಾ ಗುರ್ಬಾಜ್ ಅವರ ವಿಕೆಟನ್ನು ಅಫ್ಘಾನ್ ತಂಡ ರನ್ ಗಳಿಸುವ ಮೊದಲೇ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ನಂತರ ತಾಳ್ಮೆಯ ಆಟವಾಡಿದ ಇಬ್ರಾಹಿಂ ಜದ್ರಾನ್ 39 ರನ್ ಗಳಿಸಿ ಔಟಾದರು. ಬಳಿಕ ಅಮೋಘ ಅರ್ಧ ಶತಕ ಬಾರಿಸಿದ ರಹಮತ್ ಶಾ 62 ರನ್ ಗಳಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಬಳಿಕ ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಆಕರ್ಷಕ ಜತೆಯಾಟವಾಡಿದರು. ಶಾಹಿದಿ ರನ್ 58* , ಅಜ್ಮತುಲ್ಲಾ73* ರನ್ ದೊಡ್ಡ ಕೊಡುಗೆ ಸಲ್ಲಿಸಿ ಗೆಲುವಿನ ಕೇಕೆ ಹಾಕಿದರು.
ಲಂಕಾ ಪರ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕ 46ರನ್ , ಕುಸಾಲ್ ಮೆಂಡಿಸ್ 39, ಸದೀರ ಸಮರವಿಕ್ರಮ 36 ರನ್ ಗಳಿಸಿದರೂ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಅಫ್ಘಾನ್ ಬೌಲರ್‌ಗಳು ನಿಯಮಿತವಾಗಿ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಮಹೇಶ್ ತೀಕ್ಷಣ 29 ರನ್ ಮತ್ತು ಏಂಜೆಲೊ ಮ್ಯಾಥ್ಯೂಸ್ 23 ರನ್ ಗಳಿಸಿ ಎಂಟನೇ ವಿಕೆಟ್‌ಗೆ 42 ಎಸೆತಗಳಲ್ಲಿ ಅಮೂಲ್ಯ 45 ರನ್ ಸೇರಿಸಿದರು.
ಫಜಲ್ಕ್ ಫಾರೂಕಿ (4/34) ನಾಲ್ಕು ವಿಕೆಟ್‌ಗಳನ್ನು ಕಿತ್ತು ಅಫ್ಘಾನಿಸ್ಥಾನದ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಮುಜೀಬ್ ಉರ್ ರೆಹಮಾನ್ (2/38), ಅಜ್ಮತುಲ್ಲಾ ಒಮರ್ಜಾಯ್ (1/37) ರಶೀದ್ ಖಾನ್ (1/50) ಎಲ್ಲರೂ ಸಾಮೂಹಿಕ ಪ್ರಯತ್ನದಿಂದ ಲಂಕಾ ವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.