ಲಕ್ನೋ: 20 ವರ್ಷಗಳ ನಂತ್ರ ವಿಶ್ವಕಪ್ ಟೂರ್ನಿಯಲ್ಲಿ ಆಂಗ್ಲರನ್ನ ಸೋಲಿಸಿ ಟೀಮ್ಜ ಇಂಡಿಯಾ ಜಯದ ಮಾಲೆ ಹಾಕಿಕೊಂಡಿದೆ. ಜೊತೆಗೆ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಬಿಗಿ ಬೌಲಿಂಗ್ ದಾಳಿ ನೆರವಿನಿಂದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ, ಇಂಗ್ಲೆಂಡ್ ತಂಡಕ್ಕೆ 230 ರನ್‌ಗಳ ಗುರಿ ನೀಡಿತ್ತು. ಬೃಹತ್‌ಮೊತ್ತ ಕಲೆಹಾಕುವ ಗುರಿ ಹೊಂದಿದ್ದ ಭಾರತಕ್ಕೆ ಆರಂಭದಲ್ಲೇ ನಿರಾಸೆಯಾಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅಲ್ಪ ಮೊತ್ತಕ್ಕೆ ಕೈಕೊಟ್ಟ ಪರಿಣಾಮ ಟೀಂ ಇಂಡಿಯಾ 50 ಓವರ್‌ಗಳಲ್ಲಿ ಕೇವಲ 229 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಶುಭಮನ್ ಗಿಲ್ 9 ರನ್, ಶ್ರೇಯಸ್ ಅಯ್ಯರ್ 4 ರನ್ ಗಳಿಸಿದ್ರೆ, ವಿರಾಟ್ ಕೊಹ್ಲಿ 9 ಎಸೆತಗಳಲ್ಲಿ ಒಂದೂ ರನ್ ಗಳಿಸದೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ 4ನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಜೋಡಿ 111 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ಕಂಡಿತ್ತು. ಕೆ.ಎಲ್ ರಾಹುಲ್ 58 ಎಸೆತಗಳಲ್ಲಿ 39 ರನ್ ಗಳಿಸಿ ಔಟಾಗುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್ ಕಳೆದುಕೊಂಡಿತು.
ಆಂಗ್ಲರ ವಿರುದ್ಧ ಹೋರಾಡಿದ ರೋಹಿತ್ ಶರ್ಮಾ 101 ಎಸೆತಗಳಲ್ಲಿ 87 ರನ್ (3 ಸಿಕ್ಸರ್, 10 ಬೌಂಡರಿ) ಗಳಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 47 ಎಸೆತಗಳಲ್ಲಿ 49 ರನ್ (1 ಸಿಕ್ಸರ್, 4 ಬೌಂಡರಿ) ಗಳಿಸಿ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ 16 ರನ್, ರವೀಂದ್ರ ಜಡೇಜಾ 8 ರನ್, ಮೊಹಮ್ಮದ್ ಶಮಿ 1 ರನ್ ಗಳಿಸಿದ್ರೆ, ಕುಲ್ದೀಪ್ ಯಾದವ್ 9 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.
ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3 ವಿಕೆಟ್ ಕಿತ್ತರೆ, ಕ್ರಿಸ್ ವೋಕ್ಸ್ ಮತ್ತು ಆದಿಲ್ ರಶೀದ್ ತಲಾ 2 ವಿಕೆಟ್ ಹಾಗೂ ಮಾರ್ಕ್‌ವುಡ್ ಒಂದು ವಿಕೆಟ್ ಪಡೆದು ಮಿಂಚಿದರು.
ಚೇಸಿಂಗ್ ಆರಂಭಿಸಿದ ಇಂಗ್ಲೆಂಡ್ ಮೊದಲ ನಾಲ್ಕು ಓವರ್‌ಗಳಲ್ಲೇ 26 ರನ್ ಬಾರಿಸಿ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆ ಮೂಡಿಸಿತ್ತು. ಆದ್ರೆ 5ನೇ ಓವರ್‌ನಲ್ಲಿ ಬುಮ್ರಾ ಮಾರಕ ದಾಳಿಯಿಂದ ಎರಡು ವಿಕೆಟ್ ಕಿತ್ತರು. ಈ ಬೆನ್ನಲ್ಲೇ ಶಮಿ ಕೂಡ ಮಾರಕದಾಳಿ ಮುಂದುವರಿಸಿದ್ದರಿಂದ ಇಂಗ್ಲೆಂಡ್ 10 ರನ್‌ಗಳ ಅಂತರದಲ್ಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಇದು ತಂಡಕ್ಕೆ ಸೋಲಿನ ಮುನ್ಸೂಚನೆ ನೀಡಿತು. ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ 25 ಓವರ್‌ಗಳಲ್ಲಿ 6 ವಿಕೆಟ್‌ಗೆ ಕೇವಲ 84 ರನ್ ಗಳಿಸಿತ್ತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಇಂಗ್ಲೆಂಡ್ ಅಂತಿಮವಾಗಿ 129 ರನ್‌ಗಳಿಗೆ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ಜಾನಿ ಬೈರ್ಸ್ಟೋವ್ 14 ರನ್, ಡೇವಿಡ್ ಮಲಾನ್ 16 ರನ್ ಗಳಿಸಿದ್ರೆ ಜೋ ರೂಟ್, ಬೆನ್‌ಸ್ಟೋಕ್ಸ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ನಂತರ ಜೋಸ್ ಬಟ್ಲರ್ 10 ರನ್, ಮೊಯಿನ್ ಅಲಿ 15 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 27 ರನ್, ಕ್ರಿಸ್‌ವೋಕ್ಸ್ 10 ರನ್ ಗಳಿಸಿದ್ರೆ, ಕೊನೆಯಲ್ಲಿ ಆದಿಲ್ ರಶೀದ್ 13 ರನ್ ಗಳಿಸಿದ್ರೆ, ಮಾರ್ಕ್‌ವುಡ್ ಶೂನ್ಯಕ್ಕೆ ಔಟಾದರು. ಡೇವಿಡ್ ವಿಲ್ಲಿ 13 ರನ್ ಗಳಿಸಿ ಅಜೇಯರಾಗುಳಿದರು.