ಕೊಡಗು: ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಕುಂಡಿಕೆಯಲ್ಲಿ ಮೊಗೆದಷ್ಟು ನೀರು ಉತ್ಪತ್ತಿಯಾಗುತ್ತಿರುವುದು ವಿಸ್ಮಯಕಾರಿಯಾಗಿದ್ದು, ಈ ಜೀವಜಲವನ್ನು ಕೊಡಗಿನವರು ಸೇರಿದಂತೆ ಸಹಸ್ರಾರು ಮಂದಿ ಭಕ್ತಿಯಿಂದ ಪೂಜಿಸುತ್ತಾರೆ. ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಜೀವ ನದಿಯನ್ನ ಕಣ್ತುಂಬಿಸಿಕೊಳ್ಳಲು ಸಹಸ್ರಾರು ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.ಇಂದು ರಾತ್ರಿ 1 ಗಂಟೆ 27 ನಿಮಿಷಕ್ಕೆ ತುಲಾ ಲಘ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ. ಪ್ರಧಾನ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಮಧ್ಯ ರಾತ್ರಿ ತೀರ್ಥೋದ್ಭವವಾಗುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ವಿಸ್ಮಯಕಾರಿ ಕುಂಡಿಕೆ:
ತಲಕಾವೇರಿಯಲ್ಲಿನ ಕುಂಡಿಕೆಯಲ್ಲಿ ಪ್ರತಿ ವರ್ಷ ಕಾವೇರಿ ತೀರ್ಥ ರೂಪದಲ್ಲಿದರ್ಶನ ನೀಡುತ್ತಾಳೆ ಎನ್ನುವುದು ಪುರಾತನ ಕಾಲದಿಂದಲೂ ಇರುವ ನಂಬಿಕೆ.
ಈ ಸಂದರ್ಭ ಸಹಸ್ರಾರು ಭಕ್ತರು ತೀರ್ಥರೂಪಿಣಿ ಕಾವೇರಿ ತಾಯಿಯನ್ನು ಕಣ್ಣು ತುಂಬಿಕೊಳ್ಳುತ್ತಾರೆ. ಕೇವಲ ಕೊಡಗು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಆಗಮಿಸಿ ಇಲ್ಲಿಂದ ತೀರ್ಥ ಕೊಂಡೊಯ್ಯುತ್ತಾರೆ. ಇಲ್ಲಿನ ಪುಟ್ಟ ಕುಂಡಿಕೆಯಲ್ಲಿನ ಕಾವೇರಿ ಜಲವನ್ನು ತೀರ್ಥವೆಂದು ನಂಬಿ ಪೂಜಿಸುವುದಲ್ಲದೆ ಮನೆಗೆ ಕೊಂಡೊಯ್ಯುತ್ತಾರೆ. ಈ ಕುಂಡಿಕೆಯನ್ನು ಭಕ್ತಿ ಭಾವದಿಂದ ಕಾಣುತ್ತಾರೆ.
ತಲಕಾವೇರಿಗೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಭಕ್ತರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.