ತಮ್ಮ ವಿಭಿನ್ನ ಪ್ರಯತ್ನದಿಂದ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ‘ಕಾಂತಾರ’ ಖ್ಯಾತಿಯ ರಿಷಭ್ ಶೆಟ್ಟಿ ಈಗ ‘ಐಕಾನಿಕ್ ಡೈರೆಕ್ಟರ್’ ಆಗಿ ಹೊರಹೊಮ್ಮಿದ್ದಾರೆ. ಇನ್ನು, ‘777 ಚಾರ್ಲಿ’ ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ರಕ್ಷಿತ್ ಶೆಟ್ಟಿ ‘ಟ್ರೆಂಡಿಂಗ್ ಆ್ಯಕ್ಟರ್’ ಆಗಿದ್ದಾರೆ. ಅವರಿಬ್ಬರಿಗೂ ಇಂಥದ್ದೊಂದು ಪ್ರಶಸ್ತಿಗೆ ಭಾಜನರಾಗಿರುವುದು ಇನ್ನೋವೇಟೀವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ.
ಇನ್ನೋವೇಟೀವ್ ಫಿಲಂ ಅಕಾಡೆಮಿ ಮತ್ತು ಇನ್ನೋವೇಟೀವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಸ್ಥಾಪಕ ಶರವಣ ಪ್ರಸಾದ್, ಮಾರತ್‍ಹಳ್ಳಿಯ ಇನ್ನೋವೇಟೀವ್ ಮಲ್ಟಿಪ್ಲೆಕ್ಸ್ ನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ 6ನೇ ಇನ್ನೋವೇಟೀವ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಐ.ಎ.ಎಸ್ ಅಧಿಕಾರಿ ಅಪೂರ್ವ ಚಂದ್ರ ಭಾಗವಹಿಸಿ, ಚಿತ್ರೋತ್ಸವವನ್ನು ಉದ್ಘಾಟಿಸಿದರು. ಚಿತ್ರೋತ್ಸವದ ಅಧ್ಯಕ್ಷ ರಾಕ್‍ಲೈನ್ ವೆಂಕಟೇಶ್, ಫಿಲಂ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರ್ಕರ ಮತ್ತು ಹಲವು ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಭಾರತೀರಾಜ, ರಾಜೇಂದ್ರ ಸಿಂಗ್ ಬಾಬು, ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ನಟ ಸಾಯಿಕುಮಾರ್ ಮುಂತಾದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ತೆಲುಗು ನಟಿ ಮತ್ತು ಸಚಿವೆ ರೋಜಾ, ಹಿರಿಯ ನಟಿ ಅಂಬಿಕಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.