ನವದೆಹಲಿ: ಭಾರತದ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ಶುರುವಾಗಿದ್ದು, ದಕ್ಷಿಣ ಆಫ್ರಿಕಾ ತಂಡ ತನ್ನ ಆರಂಭಿಕ ಪಂದ್ಯದಲ್ಲೇ ವಿಶ್ವದಾಖಲೆ ಬರೆದಿದೆ.
ಶನಿವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 428 ರನ್ ಬಾರಿಸಿದೆ. ಈ ಪೈಕಿ ಮೂವರು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಶತಕ ಸಿಡಿಸಿರುವುದು ವಿಶೇಷ. ಅಲ್ಲದೇ ಇದು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಸಹ ಆಗಿದೆ.
2015ರ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 417 ರನ್ ಸಿಡಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ತಂಡ 428 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದೆ.
ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್ ಹಾಗೂ ತೆಂಬಾ ಬಹುಮಾ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರು. ಆದ್ರೆ 2ನೇ ವಿಕೆಟಿಗೆ ಜೊತೆಯಾದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಹಾಗೂ ಡಿಕಾಕ್ ಜೋಡಿ 174 ಎಸೆತಗಳಲ್ಲಿ 204 ರನ್ ಸಿಡಿಸಿತ್ತು. ಡಿಕಾಕ್ 84 ಎಸೆತಗಳಲ್ಲಿ 100 ರನ್ (3 ಸಿಕ್ಸರ್, 8 ಬೌಂಡರಿ) ಚಚ್ಚಿದರೆ, ಡುಸ್ಸೆನ್ 110 ಎಸೆತಗಳಲ್ಲಿ 108 ರನ್ (2 ಸಿಕ್ಸರ್, 13 ಬೌಂಡರಿ) ಬಾರಿಸಿದರು. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡನ್ ಮಾರ್ಕ್ರಮ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಲಂಕಾ ಬೌಲರ್‌ಗಳನ್ನ ಬೆಂಡೆತ್ತಿದರು. 196.29 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಮಾರ್ಕ್ರಮ್ 49 ಎಸೆತಗಳಲ್ಲೇ 14 ಬೌಂಡರಿ, 3 ಭರ್ಜರಿ ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಮೆರೆದಾಡಿದರು. ಒಟ್ಟು 54 ಎಸೆತಗಳಲ್ಲಿ 106 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು.
ಈ ಬೆನ್ನಲ್ಲೇ ಹೆನ್‌ರಿಚ್ ಕ್ಲಾಸೆನ್ 32 ರನ್, ಡೇವಿಡ್ ಮಿಲ್ಲರ್ 21 ಎಸೆತಗಳಲ್ಲಿ ಅಜೇಯ 39 ರನ್ ಹಾಗೂ ಮಾರ್ಕೊ ಜಾನ್ಸೆನ್ ಅಜೇಯ 12 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 428 ರನ್ ಬಾರಿಸಿತು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 2 ವಿಕೆಟ್ ಕಿತ್ತರೆ, ಕಸುನ್ ರಜಿತಾ, ಮತೀಶ ಪಥಿರಣ, ದುನಿತ್ ವೆಲ್ಲಲಾಗೆ ತಲಾ ಒಂದೊಂದು ವಿಕೆಟ್ ಪಡೆದರು.