ಕಾಶ್ಮೀರದಲ್ಲಿ ಸದ್ದು ಮಾಡಿದ ಕರಾವಳಿಯ ಚೆಂಡೆ, ಮದ್ದಳೆ: ಯಕ್ಷಗಾನ ಪ್ರದರ್ಶನಕ್ಕೆ ಮನಸೋತ ಲೆ.ಗವರ್ನರ್

By: Ommnews

Date:

Share post:

ಮಂಗಳೂರು, ಅ. 4 : ಕರಾವಳಿಯ ಗಂಡುಕಲೆ ಎಂದೇ ಹೆಸರಾದ ಯಕ್ಷಗಾನ ಭಾರತದ ಮುಕುಟಮಣಿ ಕಾಶ್ಮೀರದಲ್ಲಿ ಪ್ರದರ್ಶನಗೊಂಡಿದೆ. ಜಮ್ಮು, ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರು ಸ್ವತಃ ಈ ಪ್ರದರ್ಶನವನ್ನು ವೀಕ್ಷಿಸಿ, ಚೆಂಡೆ, ಮದ್ದಳೆ ಸದ್ದಿಗೆ ಮನಸೋತರು. ವೇಷಧಾರಿಗಳ ದಿಗಿಣಕ್ಕೆ ತಾಳ ಹಾಕಿದರು.

Advertisement
Advertisement
Advertisement

ಗಾಂಧಿ ಜಯಂತಿ ಪ್ರಯುಕ್ತ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಶೇರ್-ಇ-ಕಾಶ್ಮೀರ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ದೆಹಲಿ ಘಟಕ, ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷಾ ಇಲಾಖೆ ಆಯೋಜಿಸಿದ್ದ ಹಿಂದಿ ಯಕ್ಷಗಾನ ಮತ್ತು ಪಜ್ಜೆ-ಗೆಜ್ಜೆ ತುಳು-ಕನ್ನಡ ಶಾಸ್ತ್ರೀಯ, ಜಾನಪದ ನೃತ್ಯ ಪ್ರಕಾರ ಪ್ರದರ್ಶನಗೊಂಡವು.

ಯಕ್ಷನು ಈಗ ಜಮ್ಮು-ಕಾಶ್ಮೀರಕ್ಕೆ ಬಂದು ನನ್ನಲ್ಲಿ, ನಿನಗೆ ಮಹದಚ್ಚರಿಯ ವಿಷಯ ಯಾವುದು ಎಂದು ಕೇಳಿದರೆ, ಇಷ್ಟು ಮಂದಿ ಕರ್ನಾಟಕದಿಂದ ಬಂದು ಶ್ರೀನಗರದಲ್ಲಿ ವೈಭವಯುತವಾಗಿ ಯಕ್ಷಗಾನ ಪ್ರದರ್ಶನ ಮಾಡಿದ್ದೇ ದೊಡ್ಡ ಅಚ್ಚರಿ ಎನ್ನುತ್ತೇನೆ..” ಎಂದು ಸ್ವತಃ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಹೇಳಿದರು.

ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದಲ್ಲಿ ಪಾವಂಜೆ ಮೇಳದ ಕಲಾವಿದರು ಪ್ರದರ್ಶಿಸಿದ ಕಟೀಲು ಶ್ರೀದೇವಿ ಮಹಾತ್ಮೆ ಯಕ್ಷಗಾನ ವೀಕ್ಷಿಸಿದ ಲೆ.ಗವರ್ನರ್‌ ಸಿನ್ಹಾ, ಕಲೆ ಸಮಾಜವನ್ನು ಒಗ್ಗೂಡಿಸುತ್ತದೆ. ಸಮಾಜ ಜಾಗೃತಗೊಂಡಾಗ ರಾಷ್ಟ್ರ ನಿರ್ಮಾಣ ಸಾಧ್ಯ. ದೇಶದ ವೈವಿಧ್ಯಮಯ ಕಲೆಗಳು ಈ ಕೆಲಸ ಮಾಡುತ್ತಿವೆ. ನಮ್ಮ ವಿದ್ಯುತ್‌ ಇಲಾಖೆ ಪ್ರಿನ್ಸಿಪಲ್‌ ಸೆಕ್ರೆಟರಿ ರಾಜೇಶ್‌ ಪ್ರಸಾದ್‌ ಅವರು ಗಾಂಧಿ ಜಯಂತಿಗೆ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಕೇಳಿಕೊಂಡಾಗ ಖುಷಿಯಿಂದ ಒಪ್ಪಿಗೆ ನೀಡಿದೆ. ಈ ಯಕ್ಷಗಾನ ಕಾರ್ಯಕ್ರಮ ಜಮ್ಮು-ಕಾಶ್ಮೀರದ ಸಭಿಕರನ್ನು ಮಂತ್ರಮುಗ್ಧಗೊಳಿಸಿದೆ. ಹೀಗಾಗಿ, ನವರಾತ್ರಿ ವೇಳೆ ನಿಮ್ಮ ತಂಡ ಜಮ್ಮುವಿನ ವೈಷ್ಣೋದೇವಿ ಮಂದಿರದಲ್ಲಿ ಮತ್ತೊಮ್ಮೆ ಇದೇ ಪ್ರದರ್ಶನ ನೀಡಬೇಕು ಎಂದು ಆಹ್ವಾನ ನೀಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಅರುಣ್‌ ಕುಮಾರ್‌ ಮೆಹ್ತಾ ಮಾತನಾಡಿ, ನನ್ನ 35 ವರ್ಷಗಳ ವೃತ್ತಿ ಜೀವನದಲ್ಲಿ ಇಂಥದ್ದೊಂದು ಜಾನಪದ ಕಲಾ ಪ್ರದರ್ಶನವನ್ನು ನೋಡಿರಲಿಲ್ಲ. ಬಹಳ ಸೊಗಸಾಗಿ ಮನಸ್ಸು ಮುಟ್ಟುವಂತೆ ಯಕ್ಷಗಾನ ಪ್ರದರ್ಶನ ನೀಡಿದ್ದೀರಿ. ಕಥಾನಕವೊಂದನ್ನು ವಿವರಿಸುವ ರೀತಿ ಅನೂಹ್ಯವಾದುದು ಎಂದು ಶ್ಲಾಘಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಖ್ಯಸ್ಥ ಪಟ್ಲ ಸತೀಶ್‌ ಶೆಟ್ಟಿ ಮತ್ತು ಫೌಂಡೇಷನ್‌ನ ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರಿಗೆ ಲೆ.ಗವರ್ನರ್‌ ಮನೋಜ್‌ ಸಿನ್ಹಾ ಅವರು ಸರ್ಕಾರದ ವತಿಯಿಂದ ಸನ್ಮಾನಿಸಿದರು. ಆರಂಭದಲ್ಲಿ ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರದ ಕಲಾವಿದರು ಶಾಸ್ತ್ರೀಯ, ಜನಪದ ನೃತ್ಯ ಪ್ರದರ್ಶನ ನೀಡಿದರು.

ಜಮ್ಮು-ಕಾಶ್ಮೀರ ಮತ್ತು ಯಕ್ಷಗಾನ ಕಲೆ ಮಟ್ಟಿಗೆ ಇದೊಂದು ಐತಿಹಾಸಿಕ ಕಾರ್ಯಕ್ರಮ. ಏಕೆಂದರೆ, ಜಮ್ಮು-ಕಾಶ್ಮೀರದಲ್ಲಿ ಯಕ್ಷಗಾನ ಪ್ರದರ್ಶನ ನಡೆದಿರುವುದು ಇದೇ ಮೊದಲ ಬಾರಿ. ಇದನ್ನು ನಿಜಗೊಳಿಸಿ ಹೊಸ ಇತಿಹಾಸ ಸೃಷ್ಟಿಸಲು ಕಾರಣರಾಗಿದ್ದು ಜಮ್ಮು-ಕಾಶ್ಮೀರ ವಿದ್ಯುತ್‌ ಇಲಾಖೆಯ ಪ್ರಿನ್ಸಿಪಲ್‌ ಸೆಕ್ರೆಟರಿ ರಾಜೇಶ್‌ ಪ್ರಸಾದ್‌ ಹಿರಿಯಡ್ಕ ಮತ್ತು ದಿಲ್ಲಿ ಕನ್ನಡ ಶಾಲೆ ಮತ್ತು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ. ಇಂಥದ್ದೊಂದು ಕಾರ್ಯಕ್ರಮ ನಡೆಸುವ ಬಗ್ಗೆ ಲೆ.ಗವರ್ನರ್‌ ಜತೆ ಮಾತುಕತೆ ನಡೆಸಿ, ಗಾಂಧಿ ಜಯಂತಿಯಂದೇ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಲಾಯಿತು. ಈ ಕಾರ್ಯಕ್ರಮ ವೀಕ್ಷಿಸಲೆಂದೇ ದಕ್ಷಿಣ ಕನ್ನಡದ 130ಕ್ಕಿಂತ ಹೆಚ್ಚು ಯಕ್ಷಗಾನಾಸಕ್ತರು ಶ್ರೀನಗರಕ್ಕೆ ಬಂದಿದ್ದರು. ವಿಶೇಷ ಎಂದರೆ, ಕಾರ್ಯಕ್ರಮ ವೀಕ್ಷಿಸಿದ ಲೆ.ಗ. ಮನೋಜ್‌ ಸಿನ್ಹಾ, ಮತ್ತೊಮ್ಮೆ ಕೇಂದ್ರಾಡಳಿತ ಪ್ರದೇಶಕ್ಕೆ ಬರುವಂತೆ ಆಹ್ವಾನಿಸಿ, ವೈಷ್ಣೋದೇವಿ ಮಂದಿರದಲ್ಲೇ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವಾಗಬೇಕು ಎಂದು ನಿರ್ದೇಶನ ನೀಡಿರುವುದು!

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section