ಬೆಂಗಳೂರು: ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಬ್ಯಾರಿ ಭಾಷಿಕ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್‌ನ ನೂತನ ಸೌಹಾರ್ದ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ವೇಳೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.
ಎಲ್ಲಾ ಧರ್ಮದವರ ಜೊತೆ ಸ್ನೇಹ ಭಾವದಿಂದ ಇರುವ ಹಾಗೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಸೌಹಾರ್ದಯುತ ಗುಣ ಈ ಸಮುದಾಯಕ್ಕೆ ಇದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಬ್ಯಾರಿ ಭಾಷಿಕರು ನೀಡಿರುವ ಕೊಡುಗೆ ಸ್ಮರಣೀಯವಾದುದು. ಹೆಣ್ಣುಮಕ್ಕಳು ಒಡವೆ ಹಾಕಿಕೊಂಡರೆ ಹೇಗೆ ಸುಂದರವಾಗಿ ಕಾಣುತ್ತಾರೋ, ಹಾಗೆಯೇ ಬ್ಯಾರಿ ಭಾಷಿಕರು ಕನ್ನಡವನ್ನು ಸುಂದರಗೊಳಿಸಿದ್ದಾರೆ ಎಂದರು.
ಧರ್ಮ ಯಾವುದಾದರೂ ತತ್ವವೊಂದೇ. ನಾಮ ನೂರಾದರೂ ದೈವವೊಂದೇ. ಪೂಜೆ ಯಾವುದಾದರೂ ಭಕ್ತಿಯೊಂದೇ. ಕರ್ಮ ಯಾವುದಾದರೂ ನಿಷ್ಠೆಯೊಂದೆ. ದೇವನೊಬ್ಬ ನಾಮ ಹಲವು ಎನ್ನುವ ಮಾತಿನಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ದೇವಾಲಯಗಳಿಗೆ ದಾನ-ಧರ್ಮ ಮಾಡಿದವರು ಬ್ಯಾರಿ ಭಾಷಿಕರು. ಮುಲ್ಕಿಯ ದುರ್ಗಾಪರಮೇಶ್ವರಿ ದೇವಸ್ಥಾನ ಕಟ್ಟಿಸಿದ್ದು ಬಪ್ಪ ಬ್ಯಾರಿ ಎಂದು ಇದೇ ವೇಳೆ ಸ್ಮರಿಸಿಕೊಂಡರು.
ಬ್ಯಾರಿ ಸಮುದಾಯ ಭವನಕ್ಕೆ ಸಹಾಯ ಮಾಡಲು ಅಥವಾ ನಿಮಗೆ ಆಶ್ವಾಸನೆಗಳನ್ನು ನೀಡಲು ಇಲ್ಲಿಗೆ ಬಂದಿಲ್ಲ. ಬದಲಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ಕಾರಣ ನಿಮ್ಮ ಋಣ ತೀರಿಸಲು ಬಂದಿದ್ದೇನೆ. ದೇಶದಲ್ಲಿ ಬದಲಾವಣೆಯ ಗಾಳಿ ಎಬ್ಬಿಸಿ, ಸಮರ್ಥವಾದ ಉತ್ತರ ನೀಡಲು ಕಾರಣರಾಗಿದ್ದೀರಿ ಎಂದು ತಿಳಿಸಿದರು.
ಹುಟ್ಟಿದ ಊರಿನಲ್ಲೇ ಉದ್ಯೋಗ ಸೃಷ್ಟಿ ಮಾಡಿ
ಬಿಜೆಪಿ ಸರ್ಕಾರ ಇದ್ದ ವೇಳೆ ಹೂಡಿಕೆದಾರರ ಸಮಾವೇಶದ ಮೂಲಕ 10 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿತು ಎಂದು ಹೇಳಿದ್ದರು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಒಬ್ಬರೂ ಬಂದಿರಲಿಲ್ಲ. ಗಲ್ಫ್ ಸೇರಿದಂತೆ ಹೊರದೇಶಗಳಿಗೆ ಹೋಗದೆ, ಹುಟ್ಟಿದ ಊರಿನಲ್ಲಿ ಉದ್ಯೋಗ ಸೃಷ್ಟಿ ಮಾಡಿ. ಪ್ರತಿಭಾ ಪಲಾಯನ ರಾಜ್ಯದ ಅಭಿವೃದ್ಧಿಗೆ ಮಾರಕ. ಮಂಗಳೂರು ಹೂಡಿಕೆದಾರರ ಸ್ವರ್ಗ. ಎಲ್ಲಾ ರೀತಿಯಲ್ಲೂ ಅಲ್ಲಿ ಅವಕಾಶವಿದ್ದು, ಸರ್ಕಾರ ನಿಮ್ಮ ಬೆನ್ನಿಗೆ ನಿಲ್ಲುತ್ತದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಿ. ಕೋಮು ಗಲಭೆಯ ಪ್ರಯೋಗಶಾಲೆ ಎನ್ನುವ ಹೆಸರು ಅಳಿಸಿ ಹಾಕಿ. ಮಲೇಷ್ಯಾ ಮಾದರಿಯಲ್ಲಿ ಟ್ವಿನ್ ಸಿಟಿಯನ್ನು ಮೊದಲು ಕಟ್ಟಿದವರೇ ಬ್ಯಾರಿ ಸಮುದಾಯದವರು. ನಿಮ್ಮ ಕೈಲಿ ಎಲ್ಲವೂ ಸಾಧ್ಯ ಎಂದರು.
ಸಮುದಾಯದ ಬೆಳವಣಿಗೆಗೆ ನಿವೇಶನಗಳ ಅಗತ್ಯವಿದೆ ಎಂದು ಮನವಿ ಮಾಡಿದ್ದೀರಿ. ಕಾನೂನಿ ಚೌಕಟ್ಟಿನಲ್ಲಿ ಏನೇ ಸಾಧ್ಯತೆ ಇದ್ದರೂ ಸಹಾಯ ಮಾಡಲಾಗುವುದು. ನನ್ನ ಮನೆ ಹಾಗೂ ಮುಖ್ಯಮಂತ್ರಿಗಳ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದರು.