ಚಿಕ್ಕಬಳ್ಳಾಪುರ: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಿಲ್ಲವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.
ಕಾವೇರಿ ವಿವಾದ ಸಮಸ್ಯೆ ಬಗೆಹರಿಸಲು ಪ್ರಧಾನಿ ಭೇಟಿಗೆ ಬಿಜೆಪಿ ನಾಯಕರು ಅವಕಾಶ ಕೇಳಲಿ. ಅದು ಬಿಟ್ಟು ಬಿಜೆಪಿಯವರು ಏನು ಮಾಡ್ತಿದ್ದಾರೆ? ಮೋದಿಯವರ ಬಳಿ ಹೋಗಿ ಮಾತನಾಡಬಹುದಿತ್ತಲ್ಲ? ಮೋದಿಯವರ ಅಪಾಯಿಂಟ್‌ಮೆಂಟ್ ಕೊಡಿಸಿ ಅಂತ ನಾವು ಕೇಳಿಲ್ವಾ? ಸುಮ್ನೆ ರಾಜಕೀಯ ಮಾಡೋದಾದ್ರೆ ನಾವು ಮಾಡ್ತೀವಿ. ನಾವು ಸರ್ವ ಪಕ್ಷಗಳ ಸಭೆ ಕರೆದಿಲ್ಲವಾ? ವಿರೋಧ ಪಕ್ಷದವರಿಗೂ ಗೌರವ ಕೊಟ್ಟಿದ್ದೇವೆ ಎಂದರು.
ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ. ಸಭೆ ನಡೆಸಿ ಅಪಾಯಿಂಟ್‌ಮೆಂಟ್ ಕೊಡಿಸಿ ಅಂತ ಕೇಳಿಲ್ವಾ? ಬಿಜೆಪಿ ನಾಯಕರು ಅಸಹಾಯಕತೆ ವ್ಯಕ್ತಪಡಿಸಿರಲಿಲ್ವಾ? ಇದರಲ್ಲಿ ಪ್ರಧಾನಮಂತ್ರಿಗಳನ್ನು ಮಧ್ಯೆ ತರಬಾರದು ಅಂತ ಹೇಳಿದ್ರು. ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿ ಕರ್ನಾಟಕ-ತಮಿಳುನಾಡು ಸಮಸ್ಯೆ ಬಗೆಹರಿಸಲು ಆಗಲ್ವಾ? ರಾಜಕೀಯಕ್ಕೆ ಮಾತಾಡೋದು ಬೇಡ. ಸಕಾರಾತ್ಮಕವಾಗಿ ಸರ್ಕಾರದ ಜೊತೆ ಸ್ಪಂದಿಸಿ ಎಂದರು.
ಕಾವೇರಿ ವಿಚಾರದಲ್ಲಿ ಸರ್ಕಾರ ಹಾಗೂ ಸಂಘಟನೆಗಳ ಅಭಿಪ್ರಾಯ ಒಂದೇ ಆಗಿದೆ. ಸರ್ಕಾರದ ಜೊತೆ ಎಲ್ಲರೂ ನಿಂತರೆ ಶಕ್ತಿ ಬರಲಿದೆ. ಸುಪ್ರೀಂಕೋರ್ಟ್ ಬಳಿ ಹನಿ ನೀರು ಕೊಡಲು ಸಾಧ್ಯವಿಲ್ಲ ಅಂತ ಈಗಾಗಲೇ ಲಿಖಿತ ರೂಪದಲ್ಲೇ ತಿಳಿಸಿದ್ದೇವೆ. ಬಂದ್ ಮಾಡೋದ್ರಿಂದ ಯಾವುದೇ ಪ್ರಯೋಜನವಾಗಲ್ಲ. ನಮ್ಮ ಭಿನ್ನಾಭಿಪ್ರಾಯಗಳು ಬೇರೆ ಇದ್ದು ಸರ್ಕಾರ ಸಕಾರಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಅಂದಾಗ ಪ್ರತಿಭಟನೆ ಮಾಡಬಹುದು. ನಾವೆಲ್ಲರೂ ಸೇರಿ ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರೋಣ ಎಂದರು.