ಹಾವೇರಿ: ಗಣೇಶ ಚತುರ್ಥಿ ಮುಗಿದು ಇದೀಗ ತಾಳವಾದ್ಯಗಳೊಂದಿಗೆ ಗಣೇಶ ಮೂರ್ತಿ ವಿಸರ್ಜನೆ ಮಾಡುವ ಕಾರ್ಯಕ್ರಮಗಳು ಅದ್ಧೂರಿಯಾಗಿ ಅಲ್ಲಲ್ಲಿ ನಡೆಯುತ್ತಿವೆ. ಆದ್ರೆ ರಾಣೇಬೆನ್ನೂರಿನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಒಂದೂವರೆ ಕೋಟಿ ಖರ್ಚು ಮಾಡಿ ಅಯೋಧ್ಯೆ ಶೈಲಿಯ ರಾಮಮಂದಿರ ನಿರ್ಮಾಣ ಮಾಡಲಾಗಿದೆ.

ಶತಮಾನಗಳ ಇತಿಹಾಸ ಸಾರುವ ಜೊತೆಗೆ ರಾಮಮಂದಿರದ ಇತಿಹಾಸ ತಿಳಿಸುವ ಮಾಹಿತಿಗಳನ್ನೂ ಇಲ್ಲಿ ಚಿತ್ರಿಸಲಾಗಿದೆ. ಈ ಸೌಂದರ್ಯವನ್ನ ಕಣ್ತುಂಬಿಕೊಳ್ಳಲು ಭಕ್ತರು ಮುಗಿಬೀಳುತ್ತಿದ್ದಾರೆ.
.ವಂದೇ ಮಾತರಂ ಸೇವಾ ಸಂಸ್ಥೆಯು ಕಳೆದ 15 ವರ್ಷಗಳಿಂದ ರಾಣೇಬೆನ್ನೂರಿನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾ ಬಂದಿದೆ. ಆದ್ರೆ ಈ ಬಾರಿ ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಲು ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ನೇತೃತ್ವದಲ್ಲಿ ರಾಮಮಂದಿರ ನಿರ್ಮಿಸಲಾಗಿದೆ. ಈ ಬಾರಿ ಗಣೇಶ ಪ್ರತಿಷ್ಠಾಪನೆ ಜೊತೆಗೆ ಭವ್ಯ ರಾಮಮಂದಿರವನ್ನೂ ನಿರ್ಮಾಣ ಮಾಡಲಾಗಿದೆ.

ರಾಮಮಂದಿರದ ವಿಶೇಷತೆ ಏನು?
ಸಾವಿರಾರು ಕೋಟಿ ವೆಚ್ಚದಲ್ಲಿ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮಾದರಿಯಲ್ಲೇ ಇಲ್ಲಿನ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಜೊತೆಗೆ ರಾಮ ಜನ್ಮಭೂಮಿಗಾಗಿ ನಡೆದ ಹೋರಾಟಗಳು ಹಾಗೂ ಅದರ ಹಿನ್ನೆಲೆಯನ್ನು ಬರಹಗಳಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ಮಂದಿರಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದೆ.
ಅಷ್ಟೇ ಅಲ್ಲದೇ ಇತಿಹಾಸ ಸಾರುವ ಅನೇಕ ಕಬ್ಬಿಣ ಹಾಗೂ ಫೈಬರ್‌ನಿಂದ ಸಿದ್ಧಪಡಿಸಲಾದ ಕಲಾಕೃತಿಗಳನ್ನೂ ಈ ಮಂದಿರದಲ್ಲಿ ನಿರ್ಮಿಸಲಾಗಿದೆ. ಶ್ರೀರಾಮನ ಮೂರ್ತಿಯನ್ನೂ ಇಲ್ಲಿ ಇಡಲಾಗಿದ್ದು, ಭಕ್ತರನ್ನು ಆಕರ್ಷಿಸುವಂತೆ ಮಾಡಲಾಗಿದೆ. ಭಕ್ತರು ಸಂತಸದಿಂದಲೇ ಮಂದಿರಕ್ಕೆ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹಾವೇರಿ ಅಷ್ಟೇ ಅಲ್ಲದೆ ಶಿವಮೊಗ್ಗ, ದಾವಣಗೆರೆ, ಧಾರವಾಡ ಜಿಲ್ಲೆಗಳಿಂದಲೂ ಅನೇಕರು ರಾಮಮಂದಿರ ನೋಡಲು ಸಾಗರೋಪಾದಿಯಲ್ಲಿ ಹರಿದುಬರುತ್ತಿದ್ದಾರೆ.