15 ವರ್ಷಗಳ ಬಳಿಕ ಬಾಂಗ್ಲಾದೇಶ್ ವಿರುದ್ಧ ನ್ಯೂಝಿಲೆಂಡ್ ಗೆ ಐತಿಹಾಸಿಕ ಗೆಲುವು

By: Ommnews

Date:

Share post:

ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಡೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕಿವೀಸ್ ಪಡೆ 15 ವರ್ಷಗಳ ಬಳಿಕ ಬಾಂಗ್ಲಾ ನೆಲದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಗೆಲುವಿನ ನಗೆ ಬೀರಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಲಾಕಿ ಫರ್ಗುಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

Advertisement
Advertisement
Advertisement

ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಫಿನ್ ಅಲೆನ್ (12) ಹಾಗೂ ವಿಲ್ ಹಂಗ್ (0) ಮೊದಲ ಪವರ್​ಪ್ಲೇನಲ್ಲೇ ವಿಕೆಟ್ ಒಪ್ಪಿಸಿದ್ದರು. ಇನ್ನು ಚಡ್ ಬೌವ್ಸ್ 14 ರನ್​ಗಳಿಸಿದರೆ, ಹೆನ್ರಿ ನಿಕೋಲ್ಸ್ 49 ರನ್ ಬಾರಿಸಿದರು. ಇದರ ನಡುವೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್ 66 ಎಸೆತಗಳಲ್ಲಿ 68 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.

ಮತ್ತೊಂದೆಡೆ ಇಶ್ ಸೋಧಿ 35 ರನ್​ಗಳ ಕಾಣಿಕೆ ನೀಡಿದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 49.2 ಓವರ್​ಗಳಲ್ಲಿ 254 ರನ್​ಗಳಿಸಿ ನ್ಯೂಝಿಲೆಂಡ್ ತಂಡವು ಆಲೌಟ್ ಆಯಿತು.

255 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡದ ಪರ ಆರಂಭಿಕ ತಮೀಮ್ ಇಕ್ಬಾಲ್ 58 ಎಸೆತಗಳಲ್ಲಿ 44 ರನ್ ಬಾರಿಸಿದ್ದರು. ಆದರೆ ಉಳಿದ ಬ್ಯಾಟರ್​ಗಳನ್ನು ಬೇಗನೆ ಪೆವಿಲಿಯನ್​ಗೆ ಕಳುಹಿಸುವಲ್ಲಿ ಸ್ಪಿನ್ನರ್ ಇಶ್ ಸೋಧಿ ಯಶಸ್ವಿಯಾದರು.

ಇದಾಗ್ಯೂ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮಹಮದುಲ್ಲಾ 76 ಎಸೆತಗಳಲ್ಲಿ 49 ರನ್ ಬಾರಿಸಿದರು. ಆದರೆ ಇಶ್ ಸೋಧಿ ಸ್ಪಿನ್ ಮೋಡಿಗೆ ಪೆವಿಲಿಯನ್ ಪರೇಡ್ ನಡೆಸಿದ ಬಾಂಗ್ಲಾ ಆಟಗಾರರು 41.1 ಓವರ್​ಗಳಲ್ಲಿ 168 ರನ್​ಗಳಿಗೆ ಆಲೌಟ್ ಆಯಿತು. ನ್ಯೂಝಿಲೆಂಡ್ ಪರ 10 ಓವರ್​ಗಳಲ್ಲಿ 39 ರನ್ ನೀಡಿ ಇಶ್ ಸೋಧಿ 6 ವಿಕೆಟ್ ಕಬಳಿಸಿ ಮಿಂಚಿದರು.

ಕಿವೀಸ್ ಪಡೆಗೆ ಐತಿಹಾಸಿಕ ಗೆಲುವು:

ನ್ಯೂಝಿಲೆಂಡ್ ತಂಡವು ಬಾಂಗ್ಲಾದೇಶದಲ್ಲಿ ಬಾಂಗ್ಲಾ ವಿರುದ್ಧ ಏಕದಿನ ಪಂದ್ಯ ಗೆದ್ದು ಬರೋಬ್ಬರಿ 15 ವರ್ಷಗಳೇ ಕಳೆದಿತ್ತು. ಅಂದರೆ 2008 ರಲ್ಲಿ ಕಿವೀಸ್ ಪಡೆ ಕೊನೆಯ ಬಾರಿ ಬಾಂಗ್ಲಾದೇಶ್​ನಲ್ಲಿ ಏಕದಿನ ಪಂದ್ಯ ಗೆದ್ದುಕೊಂಡಿತ್ತು. ಇದರ ನಡುವೆ ಬಾಂಗ್ಲಾದಲ್ಲಿ ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ತಂಡಗಳು 8 ಬಾರಿ ಮುಖಾಮುಖಿಯಾಗಿದೆ.

ಆದರೆ ಕಿವೀಸ್ ಪಡೆಗೆ ಒಮ್ಮೆಯೂ ಗೆಲುವು ಮಾತ್ರ ದಕ್ಕಿರಲಿಲ್ಲ. ಇದೀಗ 15 ವರ್ಷಗಳ ಬಳಿಕ ಲಾಕಿ ಫರ್ಗುಸನ್ ನಾಯಕತ್ವದ ನ್ಯೂಝಿಲೆಂಡ್ ತಂಡವು ಬಾಂಗ್ಲಾದೇಶ್ ತಂಡವನ್ನು ತವರಿನಲ್ಲೇ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಹದಿನೈದು ವರ್ಷಗಳ ಸುದೀರ್ಘ ಸೋಲಿನ ಸರಪಳಿಯನ್ನು ಕಳಚುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section