ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಐದು ವಿಕೆಟ್ಗಳಿಂದ ಮಣಿಸಿದ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಏಕದಿನ ಮಾದರಿಯಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿರುವ ಭಾರತ ತಂಡವು ಇದೀಗ ಮೂರೂ ಮಾದರಿಗಳಲ್ಲೂ ಅಂದರೆ, ಏಕದಿನ, ಟೆಸ್ಟ್ ಹಾಗೂ ಟಿ20 ಮಾದರಿಯಲ್ಲಿ ನಂ.1 ಸ್ಥಾನಕ್ಕೇರಿದೆ.
ಈ ಪಂದ್ಯಕ್ಕೂ ಮೊದಲು ಭಾರತ ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಬಹಳ ದಿನಗಳಿಂದ ನಂ.1 ಸ್ಥಾನದಲ್ಲಿತ್ತು. ಆದರೆ ಏಕದಿನ ಸರಣಿಯಲ್ಲಿ ಮಾತ್ರ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ನಡುವೆ ನಂ.1 ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿತ್ತು. ಆದರೀಗ ಕಾಂಗರೂಗಳ ಹೆಡೆಮುರಿ ಕಟ್ಟಿರುವ ಭಾರತ, ಈ ಮೊದಲು ನಂಬರ್ 1 ಏಕದಿನ ತಂಡವೆನಿಸಿಕೊಂಡಿದ್ದ ಪಾಕಿಸ್ತಾನವನ್ನು ನಂಬರ್-1 ಸ್ಥಾನದಿಂದ ಕೆಳಗಿಳಿಸಿದೆ.