ಮಂಗಳೂರು, ಸೆ.15: ದೇಶದ ಭದ್ರ ಬುನಾದಿಗೆ ಈಗ ಸಂವಿಧಾನವೇ ಕಾರಣವಾಗಿದ್ದು, ಇದು ನಮ್ಮ ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಮಾದರಿಯಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದ್ದಾರೆ.
ಅವರು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನದ ಪೀಠಿಕೆಯ ಓದು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಂವಿಧಾನ ಜತೆಗೆ ಅದರ ಪೀಠಿಕೆಯ ಮಹತ್ವ, ಅರಿವು ಸಾರ್ವಜನಿಕರ ಜತೆಯಲ್ಲಿ ವಿದ್ಯಾರ್ಥಿಗಳಿಗೂ ಅಗತ್ಯವಾಗಿ ಇರಬೇಕಾಗಿದೆ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಂವಿಧಾನದ ಅಗತ್ಯತೆ ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ತಿಳಿ ಹೇಳಿದರು. ದೇಶದ ಉಜ್ವಲ ಭವಿಷ್ಯದಲ್ಲಿ ಸಂವಿಧಾನದ ಕೊಡುಗೆಯನ್ನು ವಿದ್ಯಾರ್ಥಿಗಳ ಜತೆಯಲ್ಲಿ ಹಂಚಿಕೊಂಡು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಅರುಣಾ ಬಿ.ಪಿ ಮಾತನಾಡಿ, ಸಂವಿಧಾನದ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ. ದೇಶ ಅಭಿವೃದ್ಧಿ ಕಡೆಗೆ ಸಾಗಬೇಕಾದರೆ ನಮ್ಮ ನಿರ್ಧಾರ ಕೂಡ ಮಹತ್ವ ಪಡೆಯುತ್ತದೆ ಎನ್ನುವ ವಿಚಾರವನ್ನು ಸಂವಿಧಾನದ ಪೀಠಿಕೆ ಸ್ಥೂಲವಾಗಿ ಹೇಳುತ್ತದೆ. ದೇಶದಲ್ಲಿ ಮಾಹಿತಿ ಹಕ್ಕಿನ ಮೂಲಕ ಪ್ರಶ್ನೆ ಮಾಡುವ ಜತೆಯಲ್ಲಿ ಸಮಾನತೆ, ಸಾಮಾಜಿಕ ನ್ಯಾಯದಂತಹ ವಿಚಾರಗಳು ಸಂವಿಧಾನದಿಂದಲ್ಲೇ ಹುಟ್ಟಿಕೊಂಡಿದೆ ಎಂದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಪಂ ಸಿಇಒ ಡಾ. ಆನಂದ್ ಕೆ, ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಡಿ.ಜಿ. ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ ಬಿ., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಘು ಕೆ.ಇ, ಐಟಿಡಿಪಿ ಅಧಿಕಾರಿ ಶಿವಕುಮಾರ್ ಸಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಸಂವಿಧಾನ ಪೀಠಿಕೆಯ ವಾಚನ ನಡೆಯಿತು.
ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲೆ ಸುಮಂಗಲಾ ಎಸ್. ಕಾರ್ಯಕ್ರಮ ನಿರೂಪಿಸಿದರು.