ನವದೆಹಲಿ: ಭಾರತ, ಮಧ್ಯಪ್ರಾಚ್ಯ ಮತ್ತು ಯೂರೋಪ್ ನಡುವೆ ಎಕನಾಮಿಕ್ ಕಾರಿಡಾರ್ ಯೋಜನೆ ಜಿ20 ಶೃಂಗಸಭೆಯಲ್ಲಿ ಘೋಷಣೆ ಆದ ಬೆನ್ನಲ್ಲೇ ಕ್ಷಿಪ್ರಗತಿಯಲ್ಲಿ ಬೆಳವಣಿಗೆಗಳಾಗುತ್ತಿವೆ. ಶೃಂಗಸಭೆ ಮುಗಿದ ಒಂದೇ ದಿನಕ್ಕೆ ಸೌದಿ ಅರೇಬಿಯಾ ಮತ್ತು ಭಾರತದ ಮಧ್ಯೆ ವಿವಿಧ ಒಪ್ಪಂದಗಳಾಗಿವೆ. ವಿದ್ಯುತ್ ಉತ್ಪಾದನೆ, ಎಲೆಕ್ಟ್ರಾನಿಕ್ಸ್ ತಯಾರಿಕೆ, ಹಣಕಾಸು, ಭದ್ರತೆ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಭಾರತದ ಜೊತೆ ಸೌದಿ ಅರೇಬಿಯಾ ಸೋಮವಾರ (ಸೆ. 11) ಎಂಟು ಒಪ್ಪಂದಗಳಿಗೆ ಸಹಿ ಹಾಕಿದೆ. ಸೌದಿ ಅರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು ನಿನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಈ ಒಪ್ಪಂದಗಳಿಗೆ ಸಮ್ಮತಿ ಬಿದ್ದಿದೆ.
ಈ ಎಂಟು ಯೋಜನೆಗಳು ಭಾರತದ ಐಎಂಇಸಿ ಯೋಜನೆಗೆ ಪೂರಕವಾಗಿ ನಡೆಯಲಿವೆ ಎಂದು ಹೇಳಲಾಗುತ್ತಿದೆ. ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (ಬಿಆರ್ಐ) ಮಹಾಯೋಜನೆಗೆ ಪ್ರತಿಯಾಗಿ ಭಾರತದ ನೇತೃತ್ವದಲ್ಲಿ ಐಎಂಇಸಿ ಯೋಜನೆ ಇದೆ. ಭಾರತದ ಈ ಪ್ರಯತ್ನಕ್ಕೆ ಅಮೆರಿಕ ಹಾಗೂ ಇತರ ಐರೋಪ್ಯ ಶಕ್ತಿಗಳ ಬೆಂಬಲ ಇದೆ. ಜಿ20 ಶೃಂಗಸಭೆಯ ವೇಳೆ ಚೀನಾ ಎದುರೇ ಬಹಳಷ್ಟು ದೇಶಗಳು ಭಾರತ ಯೂರೋಪ್ ಎಕನಾಮಿಕ್ ಕಾರಿಡಾರ್ ಯೋಜನೆಗೆ ಬೆಂಬಲ ನೀಡಿದ್ದು ಹೌದು.
ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ಮಧ್ಯೆ ಸಂಪರ್ಕ ಸೇತುವೆ ಹೆಚ್ಚಿಸಲು ಪ್ರಯತ್ನಗಳಾಗಲಿವೆ. ಬಂದರು, ರಸ್ತೆ, ರೈಲು, ಆಪ್ಟಿಕಲ್ ಫೈಬರ್, ಗ್ಯಾಸ್ ಗ್ರಿಡ್ ಹೀಗೆ ಎರಡೂ ಪ್ರದೇಶಗಳ ಮಧ್ಯೆ ಕನೆಕ್ಟಿವಿಟಿ ಬಲಗೊಳ್ಳಲಿದೆ. ಭಾರತ ಮತ್ತು ಸೌದಿ ಮಧ್ಯೆ ಎಂಟು ಒಪ್ಪಂದಗಳಿಗೆ ಸಹಿಬಿದ್ದಿರುವುದು ಮಾತ್ರವಲ್ಲ, ಎರಡೂ ದೇಶಗಳ ವಿವಿಧ ಸಂಸ್ಥೆಗಳ ಮಧ್ಯೆ ತಿಳಿವಳಿಕೆ 25ಕ್ಕೂ ಹೆಚ್ಚು ಒಪ್ಪಂದಗಳಾಗಿವೆ (ಎಂಒಯು) ಎಂದು ಹೇಳಲಾಗುತ್ತಿದೆ. ಮಾಹಿತಿ ಮತ್ತು ತಂತ್ರಜ್ಞಾನ, ಕೃಷಿ, ಔಷಧ, ಪೆಟ್ರೋಕೆಮಿಕಲ್, ಮಾನವ ಸಂಪನ್ಮೂಲ ಮೊದಲಾದ ವಲಯಗಳಲ್ಲಿನ ಕಂಪನಿಗಳ ಮಧ್ಯೆ ಒಪ್ಪಂದಗಳಾಗಿವೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಬಹಳ ಯಶಸ್ವಿಯಾಗಿರುವುದನ್ನು ಸೌದಿ ಅರೇಬಿಯಾ ಗುರುತಿಸಿ ಪ್ರಶಂಸಿಸಿದೆ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ವೇಳೆ ಸೌದಿ ದೊರೆ ಈ ಬಗ್ಗೆ ಅಭಿನಂದನೆ ಸಲ್ಲಿಸಿದರೆನ್ನಲಾಗಿದೆ.
ಸೌದಿ ಜೊತೆಗಿನ ವ್ಯವಹಾರದಲ್ಲಿ ರುಪಾಯಿ ಕರೆನ್ಸಿ ಬಳಕೆ, ಸೌದಿಯಲ್ಲಿ ರುಪೇ ಕಾರ್ಡ್ಗಳ ಬಳಕೆ ಇತ್ಯಾದಿ ವಿಚಾರಗಳೂ ಚರ್ಚೆಯಲ್ಲಿವೆ. ಭಾರತ ಮತ್ತು ಸೌದಿ ಅರೇಬಿಯಾ ಮಧ್ಯೆ ವ್ಯವಹಾರ ಮೊತ್ತ 2022-23ರಲ್ಲಿ ಶೇ. 23ರಷ್ಟು ಹೆಚ್ಚಾಗಿದೆ. 52 ಬಿಲಿಯನ್ ಡಾಲರ್ನಷ್ಟು ವ್ಯಾಪಾರ ವಹಿವಾಟು ನಡೆದಿರುವುದು ವರದಿಯಾಗಿದೆ. ಕುತೂಹಲವೆಂದರೆ ಭಾರತವು ಸೌದಿ ಅರೇಬಿಯಾದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಇನ್ನು, ಸೌದಿ ಅರೇಬಿಯಾ ಭಾರತಕ್ಕೆ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.
ಸೆಪ್ಟೆಂಬರ್ 11ರಂದು ಸಂಜೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸೌದಿ ದೊರೆ ಭೇಟಿಯಾದರು. ಸೌದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಭಾರತೀಯ ಸಮುದಾಯದವರಿಗೆ ಮುಕ್ತವಾಗಿ ಬೆಳೆಯಲು ಅವಕಾಶ ಸಿಕ್ಕಿರುವುದನ್ನು ಮುರ್ಮು ಪ್ರಶಂಸಿಸಿದರು.