
ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದ ರೈತರು ಬಸವಳಿದಿದ್ದರೆ, ಗ್ರಾಹಕರು ಬೆಲೆ ಏರಿಕೆ ಬಿಸಿ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ದಿನಸಿ ಪದಾರ್ಥಗಳ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೇರುತ್ತಿದೆ. ಅದರಲ್ಲೂ ಅಕ್ಕಿ, ತೊಗರಿ, ಹೆಸರು, ಉದ್ದು ಸೇರಿದಂತೆ ಆಹಾರಧಾನ್ಯಗಳ ಬೆಲೆ ಅಂದಾಜು ಮೀರಿ ಏರಿಕೆಯಾಗಿದ್ದು ಗ್ರಾಹಕರ ಜೇಬು ಸುಡುತ್ತಿದ್ದರೆ, ರೈತರಿಗೂ ಲಾಭ ಸಿಗದಂತಾಗಿದೆ. ಹಿಂದಿನ ಎರಡು ವರ್ಷ ಪ್ರವಾಹ, ಅತಿವೃಷ್ಟಿಯಿಂದ ಬೆಳೆಗಳು ನಾಶವಾದವು. ಈ ಬಾರಿ ಮಳೆ ಕಣ್ಣಾಮುಚ್ಚಾಲೆಯಿಂದ ರೈತರು ಎರಡನೇ ಬಾರಿ ಬಿತ್ತಿದ ಬೆಳೆಯೂ ನೆಲಕಚ್ಚಿದೆ. ಒಟ್ಟಾರೆ ಉತ್ಪಾದನೆ ಪ್ರಮಾಣ ಶೇ.30 ರಿಂದ 40ರಷ್ಟು ಕುಸಿಯುವ ಆತಂಕವಿದೆ. ಕಾವೇರಿ ಕೊಳ್ಳದ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಬೆಳೆಗೂ ನೀರಿನ ತತ್ವಾರವಿದೆ. ಐಆರ್ 64, ಜಯ ಮುಂತಾದ ಸಾಮಾನ್ಯ ಭತ್ತದ ಇಳುವರಿ, ಉತ್ಪಾದನೆ ಇಳಿಮುಖವಾಗಲಿದೆ. ಮಾರುಕಟ್ಟೆಗೂ ಬೆಳೆ ತಡವಾಗಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
ಕೃಷ್ಣಾ ಕೊಳ್ಳದ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಬೆಳೆಗೆ ಸಾಕಾಗುವಷ್ಟು ನೀರಿದೆ. ಆದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಡವಾಗಿ ಮಳೆ ಸುರಿದ ಕಾರಣ ಕೃಷ್ಣಾ ಜಲಾನಯನದ ಅಣೆಕಟ್ಟೆಗೆ ತಡವಾಗಿ ನೀರು ಶೇಖರಣೆಯಾಗಿದೆ. ಇದರಿಂದಾಗಿ ನೀರಾವರಿ ಅಚ್ಚುಕಟ್ಟು ಪ್ರದೇಶದ ಇಳುವರಿಗೆ ಸ್ವಲ್ಪ ಪೆಟ್ಟುಬೀಳಲಿದೆ. ನವೆಂಬರ್ ಬದಲು ಡಿಸೆಂಬರ್ನಲ್ಲಿ ಭತ್ತ ನುರಿಸುವ, ಮಾರುಕಟ್ಟೆಗೆ ಅಕ್ಕಿ ಆವಕ ಹೆಚ್ಚುವ ನಿರೀಕ್ಷೆಯಿದೆ.
ದುಬಾರಿ ದುನಿಯಾ: ಆಹಾರಧಾನ್ಯಗಳ ಉತ್ಪಾದನೆ ಇಳಿಕೆ ಹಾದಿಯಲ್ಲಿರುವ ಕಾರಣ ಬೆಲೆ ದುಬಾರಿಯಾಗುವುದು ನಿಶ್ಚಿತ. ರಾಜ್ಯದಲ್ಲಿ ವಾರ್ಷಿಕ 65 ಲಕ್ಷ ಟನ್ ಭತ್ತ ಉತ್ಪಾದನೆಯಾಗುತ್ತದೆ. ಮಳೆ ಕೊರತೆಯಿಂದ ಈ ಬಾರಿ 45 ಲಕ್ಷ ಟನ್ಗೆ ಕುಸಿಯುವ ಅಂದಾಜಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಅಕ್ಕಿ ಪಡಿತರ, ಹಾಸ್ಟೆಲ್, ಬಿಸಿಯೂಟಕ್ಕೆ ಬಳಕೆಯಾಗಲಿದ್ದು, ಉತ್ತಮ ಗುಣಮಟ್ಟದ ಅಕ್ಕಿ ಮುಕ್ತ ಮಾರುಕಟ್ಟೆಗೆ ಹೋಗುತ್ತದೆ. ಬೇಗ ತಯಾರಿ, ಸುಲಭ ಪಚನವೆಂಬ ಕಾರಣಕ್ಕೆ ಜಾಗತಿಕವಾಗಿ ಅಕ್ಕಿ ಬಳಸುವವರ ಸಂಖ್ಯೆ ಏರುತ್ತಿದೆ. ಪ್ರತಿದಿನ ಒಬ್ಬರಿಗೆ ತಲಾ 200 ಗ್ರಾಮ್ಂತೆ ಲೆಕ್ಕ ಹಾಕಿದರೂ ಶೇ.30ರಷ್ಟು ಅಕ್ಕಿ ಕೊರತೆಯಿದೆ ಎಂದು ತಜ್ಞರು ಹೇಳುತ್ತಾರೆ. ಮಳೆ ಅಭಾವದ ವ್ಯತಿರಿಕ್ತ ಪರಿಣಾಮವನ್ನು ಕೇಂದ್ರ ಸರ್ಕಾರ ಅಂದಾಜಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಿ ರಫ್ತು ನಿಷೇಧಿಸಿತು. ಬಾಸ್ಮತಿ ಚೀಲದಲ್ಲಿ ಸೋನಾ, ಆರ್ಎನ್ಆರ್ ಇನ್ನಿತರ ಅಕ್ಕಿ ತುಂಬಿ ರಫ್ತು ಮಾಡಲಾಗುತ್ತಿದೆ ಎಂದು ತಿಳಿದು, ಬಾಸ್ಮತಿ ಅಕ್ಕಿ ರಫ್ತಿಗೂ ನಿರ್ಬಂಧ ವಿಧಿಸಿದೆ. ಆದರೂ ಆಹಾರ ಕೃಷಿ ಸಂಸ್ಥೆಯು ಸಾಮಾನ್ಯ ಅಕ್ಕಿ ಶೇ.9.8ರಷ್ಟು ಹೆಚ್ಚಳವಾಗಿದೆ. ಕಳೆದ 15 ವರ್ಷಗಳ ದಾಖಲೆಯನ್ನು ಮೀರಿದೆ ಎಂದು ಸೂಚ್ಯಂಕದಲ್ಲಿ ತಿಳಿಸಿದೆ. ಗ್ರಾಹಕ ಸೂಚ್ಯಂಕ ದರವೂ ಇದೇ ಏರುಗತಿಯನ್ನು ಬಿಂಬಿಸಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಹಾಗೂ ಸಾಮಾನ್ಯ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ದಿಗಿಲು ವ್ಯಕ್ತವಾಗುತ್ತಿದೆ.
ಶೇ.30 ಅಕ್ಕಿ ಗಿರಣಿ ಬಂದ್: ರಾಜ್ಯದಲ್ಲಿ ಸಣ್ಣ, ಮಧ್ಯಮ, ಬೃಹತ್ ಸೇರಿ ಅಂದಾಜು 2,500 ಅಕ್ಕಿ ಗಿರಣಿಗಳ ಪೈಕಿ ಶೇ.30 ಭತ್ತದ ದಾಸ್ತಾನಿಲ್ಲದೆ ಮುಚ್ಚಿವೆ. ಕಾರ್ವಿುಕರನ್ನು ಹಿಡಿದಿಟ್ಟುಕೊಳ್ಳಲು, ಖರ್ಚು-ವೆಚ್ಚ ಸರಿದೂಗಿಸಲು ಲಭ್ಯ ದಾಸ್ತಾನು ಮಿತವಾಗಿ ಬಳಸಿ ಗಿರಣಿಗಳನ್ನು ಚಾಲ್ತಿಯಲ್ಲಿಟ್ಟಿದ್ದೇವೆ ಎಂದು ಕೆಲ ಅಕ್ಕಿ ಗಿರಣಿ ಮಾಲೀಕರು ಹೇಳುತ್ತಾರೆ. ಅಂತಾರಾಜ್ಯ ಭತ್ತ ಸಾಗಣೆಗೆ ನಿರ್ಬಂಧ ವಿಧಿಸಿಲ್ಲವಾದ್ದರಿಂದ ತಮಿಳುನಾಡಿಗೆ ಹಾಗೂ ಕೇರಳಕ್ಕೂ ಒಂದಿಷ್ಟು ಭತ್ತ ಹೋಗುತ್ತಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯವಿದ್ದರೂ ಮುಂದೆ ಹೀಗೆ ಎಂದು ಹೇಳುವ ಪರಿಸ್ಥಿತಿಯಿಲ್ಲವೆಂದು ಕೆಲವು ವರ್ತಕರು ಅಭಾವದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಅಕ್ಕಿ, ರಾಗಿ, ಜೋಳದ ಬೆಲೆ ಏರಿಕೆಯಿಂದ ಮಧ್ಯಮ, ಕೆಳ ಮಧ್ಯಮ ವರ್ಗ ತತ್ತರಿಸಲಾರಂಭಿಸಿದ್ದರೆ, ಉಳಿದ ದಿನಸಿ ಪದಾರ್ಥಗಳ ಬೆಲೆ ಬಡವರು ಮತ್ತು ಕಡು ಬಡವರಿಗೆ ಭಾರವಾಗಿದೆ. ಸಾಮಾನ್ಯ ಬೆಳ್ತಗಿ, ಕುಚಲಕ್ಕಿ ಅಕ್ಕಿ ದರವೂ ಹೆಚ್ಚಿದೆ. ಅಕ್ಕಿಯಷ್ಟೇ ಅಲ್ಲ, ರಾಗಿ, ಜೋಳ, ತೊಗರಿ, ಕಡಲೆ, ಹೆಸರು, ಉದ್ದು, ಶೇಂಗಾ, ಸಕ್ಕರೆ, ಬೆಲೆಗಳು ಕೆಜಿಗೆ 10 ರಿಂದ 15 ರೂ.ನಂತೆ ಏರಿಕೆಯಾಗಿದ್ದರೆ, ಜೀರಿಗೆ, ಬೆಳ್ಳುಳ್ಳಿ, ಅರಿಶಿಣ ಮೊದಲಾದ ಮಸಾಲೆ ಪದಾರ್ಥಗಳು ಅಪರಿಮಿತವಾಗಿ ಏರಿಕೆಯಾಗಿದೆ.

ಕೃತಕ ಅಭಾವ ಶಂಕೆ
ಹಿಂದಿನ ಎರಡು ವರ್ಷಗಳ ಕಾಲ ಆಹಾರಧಾನ್ಯ, ಬೇಳೆಕಾಳುಗಳು ಮಾರುಕಟ್ಟೆ ಆವಕ ಕುಸಿದರೆ, ಈ ಬಾರಿ ಬರಗಾಲ ವಕ್ಕರಿಸಿ ಉತ್ಪಾದನೆ ಕುಸಿಯುವ ಲಕ್ಷಣಗಳು ನಿಚ್ಚಳವಾಗಿವೆ. ಪರಿಸ್ಥಿತಿಯ ದುರ್ಲಾಭ ಪಡೆಯಲು ಕೃತಕ ಅಭಾವ ಸೃಷ್ಟಿಸಿರುವ ಶಂಕೆಯಿದೆ. ದಾಸ್ತಾನು ಹಿಡಿದಿಟ್ಟು ಮತ್ತೂ ಹೆಚ್ಚಿನ ಲಾಭಕ್ಕೆ ಹವಣಿಸಿದ ಸಾಧ್ಯತೆಗಳಿವೆ. ಕೈಯಲ್ಲಿ ಬೆಳೆಯಿಲ್ಲದ ಕಾರಣ ರೈತರಿಗೆ ಬೆಲೆ ಏರಿಕೆ ಲಾಭ ಸಿಗುತ್ತಿಲ್ಲ. ಹೆಚ್ಚಿನ ಬೆಲೆ ತೆರುವ ಗ್ರಾಹಕರಿಗೆ ಸುಖವಿಲ್ಲ. ಆದರೆ ಮಧ್ಯವರ್ತಿಗಳು, ಅಕ್ರಮ ದಾಸ್ತಾನಿಟ್ಟುಕೊಂಡವರಿಗೆ ಅನುಕೂಲವಾಗಿದೆ ಎಂದು ರೈತರು ದೂರುತ್ತಾರೆ. ಬೆಲೆಗಳ ಏರಿಕೆಯ ಮೇಲೆ ನಿಗಾವಹಿಸಿ, ಅನಿರೀಕ್ಷಿತ ತಪಾಸಣೆಯಂತಹ ತುರ್ತು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ. ಕಡಿಮೆ ಗುಣಮಟ್ಟದ ಅಕ್ಕಿ ಮತ್ತಿತರ ಆಹಾರಧಾನ್ಯವು ಎಥನಾಲ್ ಉತ್ಪಾದನೆಗೆ ಬಳಕೆಯಾಗುತ್ತಿದ್ದು, ಈ ದರಗಳ ಏರಿಕೆಗೆ ಮತ್ತೊಂದು ಕಾರಣವೆಂಬ ತರ್ಕವಿದೆ.
ಉತ್ಪಾದನೆ ಇಳಿಮುಖ
=2021-22ರ ಗುರಿ: ಆಹಾರಧಾನ್ಯಗಳು- 143.68 ಲಕ್ಷ ಟನ್, ಉತ್ಪಾದನೆ: 139.28 ಲಕ್ಷ ಟನ್, ಎಣ್ಣೆಕಾಳು- 11.98 ಲಕ್ಷ ಟನ್, ಉತ್ಪಾದನೆ- 11.10 ಲಕ್ಷ ಟನ್
=2022-23ರ ಗುರಿ: ಆಹಾರ ಧಾನ್ಯಗಳು- 135.48 ಲಕ್ಷ ಟನ್, ಉತ್ಪಾದನೆ- 139.83 ಲಕ್ಷ ಟನ್, ಎಣ್ಣೆಕಾಳು- 15.23 ಲಕ್ಷ ಟನ್, ಉತ್ಪಾದನೆ- 11.53 ಲಕ್ಷ ಟನ್
ಪ್ರಸಕ್ತ ವರ್ಷದ ಪರಿಸ್ಥಿತಿ
ಪ್ರಸಕ್ತ ವರ್ಷದ ಮುಂಗಾರು ಹಂಗಾಮಿಗೆ 82.35 ಲಕ್ಷ , ಹಿಂಗಾರು 25.38 ಲಕ್ಷ ಹಾಗೂ ಬೇಸಿಗೆ ಹಂಗಾಮು 6.54 ಲಕ್ಷ ಹೆಕ್ಟೇರ್ ಸೇರಿ 114.27 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಗುರಿಯಿದೆ. ಒಟ್ಟು 148.16 ಲಕ್ಷ ಟನ್ ಆಹಾರ ಧಾನ್ಯ, 13.84 ಲಕ್ಷ ಟನ್ ಎಣ್ಣೆಕಾಳುಗಳ ಉತ್ಪಾದನೆ ಗುರಿಯಿಟ್ಟುಕೊಳ್ಳಲಾಗಿದೆ. ಆದರೆ ಮುಂಗಾರು ಹಂಗಾಮಿನಲ್ಲಿ ಶೇ. 26ರಷ್ಟು ಮಳೆ ಕೊರತೆಯಾಗಿದೆ. 82.35 ಲಕ್ಷ ಹೆಕ್ಟೇರ್ನಲ್ಲಿ ಆಗಸ್ಟ್ ಅಂತ್ಯದವರೆಗೆ 44.48 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿರುವ ಅಂದಾಜಿದೆ. ಸೆಪ್ಟೆಂಬರ್ 30ಕ್ಕೆ ಮುಂಗಾರು ಹಂಗಾಮಿನ ಅವಧಿ ಮುಗಿಯಲಿದ್ದು, ನಂತರವಷ್ಟೇ ಬಿತ್ತನೆ ಪ್ರದೇಶದ ಮಾಹಿತಿ ನಿಖರವಾಗಿ ತಿಳಿಯಲಿದ್ದು, ಉತ್ಪಾದನೆ ಪ್ರಮಾಣವನ್ನೂ ಅಂದಾಜಿಸಲು ಸಾಧ್ಯ ಎಂದು ಕೃಷಿ ಇಲಾಖೆ ಮೂಲಗಳು ಹೇಳಿವೆ.
ಹಿಂದಿನ ಎರಡು ವರ್ಷ ಅತಿವೃಷ್ಟಿ, ಈ ಬಾರಿ ಅನಾವೃಷ್ಟಿ ತಲೆದೋರಿದೆ. ಬೇಡಿಕೆ, ಬಳಕೆ ಹೆಚ್ಚಿದ್ದರೆ ಉತ್ಪಾದನೆ ಕುಸಿದಿದೆ. ಸಾಮಾನ್ಯದಿಂದ ಉತ್ತಮ ಗುಣಮಟ್ಟದ ಅಕ್ಕಿಯವರೆಗೆ ಪ್ರತಿ ಕೆಜಿಗೆ ತಲಾ ಐದರಿಂದ 10 ರೂ.ಗಳ ತನಕ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಖರೀದಿಗೆ ಅಕ್ಕಿ ಲಭ್ಯವಿರುವುದು ಸದ್ಯಕ್ಕಿರುವ ಸಮಾಧಾನ.

(ಮಾರುಕಟ್ಟೆ ಚಾಲ್ತಿ ಪ್ರವೃತ್ತಿ ಆಧರಿಸಿ ವಿಶ್ಲೇಷಣಾತ್ಮಕ ಬೆಲೆಗಳಿವು. ಬೆಂಗಳೂರು ಸೇರಿ ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ಈ ದರದಲ್ಲಿ ನಾಲ್ಕೈದು ರೂ.ಗಳ ವ್ಯತ್ಯಾಸ ಸಹಜ.)