ಪ್ರತಿದಿನ ಹಾಲು ಕುಡಿಯುವ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಹಾಗಿದ್ದರೆ, ಹಾಲನ್ನು ಸಂಪೂರ್ಣವಾಗಿ ತ್ಯಜಿಸಬೇಕೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಎಂಬುದನ್ನು ತಿಳಿಯೋಣ.
ಹಾಲು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಇದು ನಮ್ಮ ಸ್ನಾಯುಗಳು ಮತ್ತು ಮೂಳೆಗಳ ಆರೋಗ್ಯವನ್ನು ಬಲಪಡಿಸುತ್ತದೆ. ಆದರೆ ಕೆಲವು ಅಧ್ಯಯನಗಳ ಪ್ರಕಾರ ಹಾಲನ್ನು ಕುಡಿಯುವುದರಿಂದ ಪುರುಷರಲ್ಲಿ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಾಲಿನಲ್ಲಿರುವ ಹಾರ್ಮೋನುಗಳು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನಗಳು ತಿಳಿಸಿವೆ.
ಯುನೈಟೆಡ್ ಕಿಂಗ್ಡಮ್ ಮೂಲದ ಕ್ಯಾನ್ಸರ್ ಸಂಶೋಧನಾ ಕೇಂದ್ರವು ತನ್ನ ಸಂಶೋಧನಾ ಫಲಿತಾಂಶಗಳಲ್ಲಿ ಹಾಲು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಡುವಿನ ಸಂಬಂಧವನ್ನು ವಿವರಿಸಿದೆ. ಹಸುವಿನ ಹಾಲಿನಲ್ಲಿ ಈಸ್ಟ್ರೊಜೆನ್ ಮತ್ತು ಇನ್ಸುಲಿನ್ ನಂತಹ ಹಾರ್ಮೋನುಗಳು ನೈಸರ್ಗಿಕವಾಗಿ ಇರುತ್ತವೆ. ಈ ಹಾರ್ಮೋನುಗಳು ಬೆಳವಣಿಗೆಯ ಹಾರ್ಮೋನುಗಳಾಗಿವೆ. ಇವು ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತವೆ. ಸಂಶೋಧಕರ ಪ್ರಕಾರ, ಈ ಅಪಾಯವನ್ನು ಕಡಿಮೆ ಮಾಡಲು ಹಾಲು ಸೇವನೆ ಕಡಿಮೆ ಮಾಡುವುದು ಉತ್ತಮ ಎಂದಿದ್ದಾರೆ.Advertisementಅಮೆರಿಕದ ಲೋಮಾ ಲಿಂಡಾ ವಿಶ್ವವಿದ್ಯಾಲಯವು ಮೂರು ದಶಕಗಳಲ್ಲಿ ಸುಮಾರು 22,000 ಪುರುಷರ ಮೇಲೆ ಅಧ್ಯಯನ ಮಾಡಿದೆ. ಪ್ರತಿದಿನ 2.5 ರಷ್ಟು ಡೈರಿ ಉತ್ಪನ್ನಗಳನ್ನು ಸೇವಿಸುವ ಪುರುಷರು ಅದಕ್ಕಿಂತ ಅರ್ಧದಷ್ಟು ಅಥವಾ ಕಡಿಮೆ ಸೇವಿಸುವ ಪುರುಷರಿಗಿಂತ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು 34 ಪ್ರತಿಶತದಷ್ಟು ಹೆಚ್ಚು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಾಮಾನ್ಯ ಅಥವಾ ಅಧಿಕ ಕೊಬ್ಬಿನ ಹಾಲಿಗಿಂತ ಕಡಿಮೆ ಕೊಬ್ಬಿನ, ಕೆನೆ ರಹಿತ ಹಾಲು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಲೋಮಾ ಲಿಂಡಾ ವಿಶ್ವವಿದ್ಯಾಲಯದ ಸಂಶೋಧಕರು, ಹಾಲು ಅಥವಾ ಯಾವುದೇ ಆಹಾರದಿಂದ ಕ್ಯಾನ್ಸರ್ ಅಪಾಯವನ್ನು ನಿಖರವಾಗಿ ನಿರ್ಧರಿಸುವುದು ಕಷ್ಟ ಎಂದು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಹಾಲಿನೊಂದಿಗೆ ತಪ್ಪು ಆಹಾರ ಪದ್ಧತಿ ಮತ್ತು ಕಳಪೆ ಜೀವನಶೈಲಿ ಕೂಡ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್)