ಹೊಸದಿಲ್ಲಿ: ಸಂಸತ್‌ನಲ್ಲಿ ಬುಧವಾರ ಸಂಭವಿಸಿದ ಭಾರಿ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಎಂಟು ಮಂದಿ ಲೋಕಸಭಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ರಾಮಪಾಲ್, ಅರವಿಂದ್, ವೀರ್ ದಾಸ್, ಅನಿಲ್, ಪ್ರದೀಪ್, ವಿಮಿತ್, ಗಣೇಶ್ ಮತ್ತು ನರೇಂದ್ರ ಅಮಾನತುಕೊಂಡ ಸಂಸತ್ ಸಿಬ್ಬಂದಿ ಎಂದು ಗುರುತಿಸಲಾಗಿದೆ.
ಬುಧವಾರ ನಡೆದ ಆಘಾತಕಾರಿ ಘಟನೆ ಹಿನ್ನೆಲೆಯಲ್ಲಿ ಸಂಸತ್ ಭವನದಲ್ಲಿನ ಪ್ರವೇಶಕ್ಕೆ ಸಂಬಂಧಿಸಿದ ಭದ್ರತಾ ಶಿಷ್ಟಾಚಾರಗಳನ್ನು ಪರಿಷ್ಕರಿಸಲಾಗಿದೆ. ಪ್ರಸ್ತುತ ಸಂಸದರು ಹಾಗೂ ಸಿಬ್ಬಂದಿಯನ್ನು ಹೊರತುಪಡಿಸಿ ಸಂದರ್ಶಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುಖ್ಯ ದ್ವಾರವನ್ನು ಈಗ ಸಂಸದರಿಗೆ ಮಾತ್ರ ಮೀಸಲಿಡಲಾಗಿದೆ. ಇನ್ನು ಮಾಧ್ಯಮದವರು ಮತ್ತು ಸಂಸತ್ ಸಿಬ್ಬಂದಿ ಪ್ರತ್ಯೇಕ ದ್ವಾರ ಬಳಸಬೇಕಾಗುತ್ತದೆ. ಸಾರ್ವಜನಿಕರ ಪಾಸ್‌ಗೆ ಮತ್ತೆ ಅನುಮತಿ ಆರಂಭಿಸಿದಾಗ, ಅವರಿಗೆ ಪ್ರತ್ಯೇಕ ದ್ವಾರ ಮೀಸಲಿಡಲಾಗುತ್ತದೆ.
ಪ್ರಸ್ತುತ ರೆಸೆಪ್ಷನ್‌ನಿಂದ ಗ್ಯಾಲರಿವರೆಗೆ ನಾಲ್ಕು ಹಂತದ ತಪಾಸಣೆ ಇರುತ್ತದೆ. ಇಲ್ಲಿ ದೈಹಿಕ ಹಾಗೂ ಮೆಟಲರ್ ಡಿಟೆಕ್ಟರ್‌ಗಳನ್ನು ತಪಾಸಣೆಗೆ ಬಳಸಲಾಗುತ್ತದೆ. ಇದರ ಜತೆಗೆ ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಬಾಡಿ ಸ್ಕ್ಯಾನರ್ ಅನ್ನು ಅಳವಡಿಸಲು ನಿರ್ಧರಿಸಲಾಗಿದೆ. ಬುಧವಾರ ನಡೆದಂತೆ ಸಂದರ್ಶಕರ ಗ್ಯಾಲರಿಯಿಂದ ಒಳಗೆ ಜಿಗಿಯದಂತೆ ತಡೆಯಲು ಗ್ಯಾಲರಿಗೆ ಗಾಜು ಅಳವಡಿಸಲಾಗುತ್ತದೆ.