ಕಂಬಳ ಕೋಣಗಳ ಫಿಟ್ನೆಸ್ ಸೀಕ್ರೆಟ್ ಹಾಗೂ ತಿಂಗಳಿಗೆ ತಗುಲುವ ಖರ್ಚಿನ ವಿವರ

By: Ommnews

Date:

Share post:

ಮಂಗಳೂರು : ಇವತ್ತು ತುಳುನಾಡಿನ ಕಂಬಳ ಕೇವಲ ಸಾಂಪ್ರದಾಯಿಕ ಆಚರಣೆಯಷ್ಟೇ ಆಗಿ ಉಳಿದಿಲ್ಲ. ಆಧುನಿಕ ಸ್ಪರ್ಶ, ತಾರಾಮೆರುಗು ಬಂದ ಬಳಿಕ ಕಂಬಳದ ಕೋಣಗಳೂ ಹೈಟೆಕ್ ಆಗಿವೆ. ಇಂದು ಕಂಬಳಕ್ಕಾಗಿಯೇ ಕೋಣಗಳನ್ನು ಸಾಕುವ ಜನರೂ ಇದ್ದಾರೆ.

Advertisement
Advertisement
Advertisement

ಮನೆಯಲ್ಲೇ ಸಾಕಷ್ಟು ದನ, ಎಮ್ಮೆಗಳಿದ್ದು, ಅಲ್ಲೇ ಜನಿಸಿದ ಕೋಣಗಳನ್ನು ಸಾಕುವುದು ಒಂದು ಬಗೆಯಾದರೆ, ಕೋಣಗಳನ್ನು ಲಕ್ಷಗಟ್ಟಲೆ ದುಡ್ಡು ಕೊಟ್ಟು ಖರೀದಿಸಿ ಅವುಗಳನ್ನು ಸಲಹುವುದು ಇನ್ನೊಂದು ಬಗೆ.

ಎಮ್ಮೆ ಗಂಡುಕರುವನ್ನು ಹಾಕಿದರೆ, ಕಂಬಳಪ್ರಿಯರಿಗೆ ಹೆಮ್ಮೆ. ಹುರುಳಿಯನ್ನು ಸಣ್ಣ ಪ್ರಮಾಣದಲ್ಲಿ ಆಗಿಂದಲೇ ತಿನಿಸಲು ಆರಂಭಿಸಲಾಗುತ್ತದೆ. ಕಂಬಳಕ್ಕೆ ಬಳಕೆಯಾಗುವ ಕೋಣಗಳಿಗೆ ಆಕಾರಕ್ಕೆ ತಕ್ಕುದಾದ ಹೆಸರಿರುತ್ತದೆ. ಕಾಟಿ, ಮಂಜು, ಮೋಡಾ, ಕಾಲಾ, ಬೊಲ್ಲಾ, ಕೆಂಚಾ ಹೀಗೆ ಬೇರೆ ಬೇರೆ ಜಾತಿಯ ಕೋಣಗಳು ಇರುತ್ತವೆ. ಇವುಗಳಲ್ಲಿ ಕಾಳಾ (ಕಾಲಾ) ಕೋಣಗಳಿಗೆ ಬೇಡಿಕೆ ಜಾಸ್ತಿ. ತಿಂಗಳಲ್ಲಿ ಏನಿದ್ದರೂ ಒಂದು ಲಕ್ಷ ರೂಪಾಯಿವರೆಗೆ ಖರ್ಚು ಆಗುತ್ತದೆ ಎನ್ನುತ್ತಾರೆ ಕೋಣ ಸಾಕುವವರು.

ಕೋಣಗಳನ್ನು ಸಾಂಪ್ರದಾಯಿಕವಾಗಿಯೇ ಸಾಕುವವರು ಇರುತ್ತಾರೆ. ಮಾಮೂಲಿ ಹಟ್ಟಿಯಲ್ಲಿ ಇತರ ಜಾನುವಾರುಗಳಿಗಿಂತ ಸ್ವಲ್ಪ ಭಿನ್ನವಾಗಿ ಹಾಗೂ ಪ್ರತ್ಯೇಕವಾಗಿ ಕೋಣಗಳನ್ನಿರಿಸಿ, ಆರೈಕೆ ಮಾಡುವವರು ಒಂದೆಡೆಯಾದರೆ, ಮತ್ತೊಂದೆಡೆ, ಹೈಟೆಕ್ ಆರೈಕೆಯೂ ಉಂಟು.

ಋತುಮಾನಕ್ಕೆ ತಕ್ಕಂತೆ ಆಹಾರ ಪದ್ಧತಿಯಲ್ಲೂ ಸ್ವಲ್ಪ ಬದಲಾವಣೆ ಆಗುತ್ತದೆ. ನವೆಂಬರ್ ನಿಂದ ಮಾರ್ಚ್ ತಿಂಗಳು ಕಂಬಳದ ಸೀಸನ್ ಆಗಿರುವ ಕಾರಣ, ಒಣಹುಲ್ಲು (ಬೈಹುಲ್ಲು), ಹುರುಳಿ ಕಾಳು, ಹಣ್ಣು, ತರಕಾರಿ, ಶಾಖ ಜಾಸ್ತಿಯಾದರೆ, ಕುಂಬಳಕಾಯಿ, ಹಣ್ಣುಗಳನ್ನು ನೀಡಲಾಗುತ್ತದೆ. ಬೇಸಗೆ ಕಾಲದಲ್ಲಿ ದೇಹ ತಂಪಾಗಿಸಲು ಒಳ್ಳೆಣ್ಣೆಯನ್ನು ಹುರುಳಿ ಹಿಟ್ಟಿನಲ್ಲಿ ಸೇರಿಸಿ ಕೊಡುವುದುಂಟು. ಅಲ್ಲದೆ, ಎಣ್ಣೆಯಲ್ಲಿ ಮಸಾಜ್ ಮಾಡುವುದು ಅತ್ಯಂತ ಜರೂರಾದ ಕಾರ್ಯ. ಕೋಣಗಳನ್ನು ಹತ್ತಿರವೇನಾದರೂ ಸಣ್ಣ, ಹಾಗೂ ಮುಳುಗದಂಥ ಕೆರೆಯಂಥ ಜಾಗವಿದ್ದರೆ, ಅಲ್ಲಿಗೆ ಕರೆದುಕೊಂಡು ಹೋಗಿ ಬಿಡುವುದೂ ಇರುತ್ತದೆ. ಕೆಲವರು ಹೈಟೆಕ್ ಈಜುಕೊಳವನ್ನೂ ನಿರ್ಮಿಸಿದ್ದಾರೆ. ಹೀಗಾಗಿ ಕೋಣಗಳ ಫಿಟ್ನೆಸ್‌ಗೆ ಸಾಕಷ್ಟು ಶ್ರಮ ವಹಿಸಲಾಗುತ್ತದೆ.

ಈ ಕುರಿತು ಕಂಬಳ ಕೋಣಗಳ ಮಾಲೀಕ ಹಾಗೂ ಪ್ರಗತಿಪರ ಕೃಷಿಕರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸರಪಾಡಿಯ ಲಿಯೋ ಫೆರ್ನಾಂಡೀಸ್ ಅವರು, ನಾನು ಎರಡು ಕೋಣಗಳನ್ನು ಸಾಕಿದ್ದೇನೆ. ತಿಂಗಳಿಗೆ 90 ಸಾವಿರದಷ್ಟು ಕನಿಷ್ಠ ಖರ್ಚು ಆಗುತ್ತದೆ. ಪ್ರತಿದಿನವೂ ಅವುಗಳನ್ನು ಹುರಿಗೊಳಿಸುವುದು ಸವಾಲು. ಕಳೆದ ಎರಡು ವರ್ಷಗಳಿಂದ ನಾನು ಕೋಣಗಳನ್ನು ಸಾಕುತ್ತಿದ್ದೇನೆ. ಇವು ಸೆಮಿಫೈನಲ್ಸ್ ವರೆಗೂ ಹೋಗಿವೆ. ನನ್ನಲ್ಲಿ ಮೋಡಾ ಮತ್ತು ಕಾಲಾ ಜಾತಿಯ ಕೋಣಗಳಿವೆ. ಮೋಡಾದ ಕೊಂಬು ಕೆಳಗಿರುತ್ತದೆ, ಕಾಲಾದ ಕೊಂಬು ನೇರವಾಗಿರುತ್ತದೆ. ನೋಡಲು ಕಪ್ಪಾಗಿರುತ್ತದೆ. ಇವುಗಳನ್ನು ಅಕ್ಕರೆಯಿಂದ ಸಾಕುತ್ತಿದ್ದೇನೆ ಎಂದರು.

ಕಳೆದ ಸೀಸನ್‌ನಲ್ಲಿ ಒಟ್ಟು 10 ಕಂಬಳಗಳಿಗೆ ನಾನು ಕೋಣಗಳನ್ನು ಕಳಿಸಿದ್ದೇನೆ ಎಂದ ಲಿಯೋ, ಅದಕ್ಕಾಗಿ ಓಟಗಾರರೊಬ್ಬರನ್ನು ಗೊತ್ತು ಮಾಡಿದ್ದೇನೆ. ಅರುಣ್ ಪೂಜಾರಿ ಅವರು ನನ್ನ ಕೋಣಗಳನ್ನು ಓಡಿಸುತ್ತಾರೆ. ವಾಹನ ವ್ಯವಸ್ಥೆ ಎಲ್ಲವೂ ಸೇರಿದರೆ, ಕಂಬಳಕ್ಕೆ ಕೋಣಗಳನ್ನು ಕಳುಹಿಸಿ, ಅವುಗಳನ್ನು ವಾಪಸ್ ಕರೆತರುವುದು ಲಾಭದಾಯಕವಾದ ವಿಚಾರವೇನಲ್ಲ.

ಒಂದು ಕಂಬಳಕ್ಕೆ ಕೋಣವನ್ನು ತೆಗೆದುಕೊಂಡು ಹೋಗಿ ವಾಪಸ್ ತರುವವರೆಗೆ ಎಲ್ಲ ಖರ್ಚುಗಳನ್ನೂ ಸೇರಿಸಿದರೆ, ಐವತ್ತು ಸಾವಿರದಷ್ಟು ಆಗುತ್ತದೆ. ಆದರೆ, ನಮ್ಮೂರಿನ ಹೆಮ್ಮೆಯ ಕ್ರೀಡೆ ಎಂಬ ದೃಷ್ಟಿಯಿಂದ ಹೈನುಗಾರನೂ ಆದ ನಾನು ಕೋಣಗಳನ್ನು ಸಾಕುತ್ತಿದ್ದೇನೆ. ಇದರಲ್ಲೂ ಖುಷಿ ಇದೆ. ನಾನು ಕೋಣಗಳಿಗೆ ಪ್ರತಿದಿನ ಸುಮಾರು 3 ಸಾವಿರ ರೂಗಳಷ್ಟು ಖರ್ಚು ಮಾಡುತ್ತಿದ್ದೇನೆ. ನಿತ್ಯ ಬೈಹುಲ್ಲು, ನಾಲ್ಕು ಕೆಜಿ ಹುರುಳಿ, ಕುಂಬಳಕಾಯಿ, ನೀರು ಆರಿದ ತೆಂಗಿನಕಾಯಿ, ಹಣ್ಣು ಹಂಪಲು ನೀಡುತ್ತೇನೆ ಎಂದು ವಿವರಿಸಿದರು.

ಕಂಬಳದ ಕೋಣಗಳನ್ನು ಆಯ್ಕೆ ಮಾಡುವುದೇ ಅವುಗಳ ಸ್ಪೀಡ್ ಗಾಗಿ. ಒಲಿಂಪಿಕ್ ದಾಖಲೆ ಸರಿಗಟ್ಟಬಲ್ಲ ಕ್ಷಮತೆ ಇರುವ ಓಟಗಾರರು, ಕುದುರೆಯನ್ನೂ ಮೀರಿಸಿ ಓಡುವ ಕೋಣಗಳಿಗಾಗಿ ಕಂಬಳಪ್ರಿಯರು ಹುಡುಕುತ್ತಾರೆ. ಹೀಗಾಗಿಯೇ ಓಡುವ ತಾಕತ್ತಿರುವ ಕೋಣಗಳು ಕಂಬಳದ ಪ್ಲಸ್ ಪಾಯಿಂಟ್. ಕರಾವಳಿಯ ಕೋಣಗಳು ನೀರಿನ ಗದ್ದೆಯಲ್ಲಿ ಓಡುವುದಕ್ಕೆ ಪ್ರಸಿದ್ಧವಾದುದು ಹಾಗೂ ಅವುಗಳಿಗೆ ಹೊಂದಿಕೊಂಡು ಇರುವಂಥದ್ದು.

ದಕ್ಷಿಣ ಕನ್ನಡ, ಉಡುಪಿ ಭಾಗದ ಈ ಕೋಣಗಳ ಹೆಸರಲ್ಲಿ ಅಂಚೆ ಚೀಟಿಯೂ ಆಗಿದೆ. ಮುಲ್ಕಿ ಪೊಯ್ಯೊಟ್ಟು ಸದಾಶಿವ ಸಾಲಿಯಾನ್ ಅವರ ನಾಗರಾಜ ಹೆಸರಿನ ಕೋಣ 115 ಬಾರಿ ಪ್ರಶಸ್ತಿ ಗೆದ್ದಿದೆ. ಇದನ್ನು ಪರಿಗಣಿಸಿ, ಕೋಣ ಹೆಸರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಲಾಗಿತ್ತು. ಬೋಳಂತೂರು ಗಂಗಾಧರ ರೈಗಳ ಕಾಟಿ ಇಪ್ಪತ್ತೈದು ವರ್ಷಗಳಿಂದ ಕಂಬಳದಲ್ಲಿ ಪಾಲ್ಗೊಳ್ಳುತ್ತಿವೆ. ಸೀನಿಯರ್ ಕೋಣಗಳಿಗೆ ಸನ್ಮಾನಗಳೂ ಆಗಿದ್ದವು. ಏನಿದ್ದರೂ ಫೊಟೊಫಿನಿಷ್ ರಿಸಲ್ಟ್ ನೀಡುವ ರೋಮಾಂಚಕಾರಿ ಕ್ರೀಡೆಯಾಗಿರುವ ಕಂಬಳಕ್ಕೆ ಕಟ್ಟುಮಸ್ತಾದ ಕೋಣಗಳೇ ಹೀರೋಸ್.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section