ಇಂದಿನಿಂದ 2 ದಿನ ಬೆಂಗ್ಳೂರಿನಲ್ಲಿ ಕಂಬಳ

By: Ommnews

Date:

Share post:

ಬೆಂಗಳೂರು:ಕಂಬಳದ ಕೋಣಗಳೀಗ ಸಿಲಿಕಾನ್ ಸಿಟಿಗೆ ಕಾಲಿಟ್ಟಿದ್ದು, ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರು ಸಾಂಸ್ಕೃತಿಕ ಕ್ರೀಡೆಗೆ ಸಾಕ್ಷಿಯಾಗುತ್ತಿದೆ. ಇಂದಿನಿಂದ ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳದ ಕಲರವ ಇರಲಿದೆ. ಈ ಮೊದಲು ಕಡಲತೀರದ ಜನರಿಗಷ್ಟೇ ಸೀಮಿತವಾಗಿದ್ದ ಈ ಕ್ರೀಡೆಯನ್ನು ಮೊದಲ ಬಾರಿಗೆ ಬೆಂಗಳೂರು ನಿವಾಸಿಗಳಿಗೂ ಪರಿಚಯಿಸಲಾಗುತ್ತಿದೆ. ಲಕ್ಷಾಂತರ ಮಂದಿ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ.

Advertisement
Advertisement
Advertisement

ನಮ್ಮ ಕಂಬಳ ಘೋಷವಾಕ್ಯದೊಂದಿಗೆ ಸಿಲಿಕಾನ್‌ ಸಿಟಿಯಲ್ಲಿ ಕಂಬಳ ನಡೆಯುತ್ತಿದ್ದು, 200 ಜೋಡಿ ಕೋಣಗಳು ಓಟದ ರಂಗು ಬೀರಲು ಸಿದ್ಧವಾಗಿವೆ. ಇಂದು ಮಧ್ಯಾಹ್ನದ ನಂತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳಕ್ಕೆ ಚಾಲನೆ ಕೊಡಲಿದ್ದಾರೆ. ಅದಕ್ಕೂ ಮುನ್ನ ಅಶ್ವಿನಿ ಪುನೀತ್ ರಾಜಕುಮಾರ್ ಅವರು ರಾಜ ಮಹಾರಾಜರ ಹೆಸರಿನಲ್ಲಿ ನಿರ್ಮಿಸಲಾಗಿರುವ ಕಂಬಳದ ಜೋಡು ಕರೆ ಉದ್ಘಾಟನೆ ನೆರವೇರಲಿದ್ದಾರೆ. ನಂತರ ಮಾಜಿ ಸಿಎಂಗಳಾದ ಬಿ.ಎಸ್‌ ಯಡಿಯೂರಪ್ಪ ಅವರು ಸಭಾ ಕಾರ್ಯಕ್ರಮ ಮತ್ತು ಹೆಚ್‌.ಡಿ ಕುಮಾರಸ್ವಾಮಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದಾರೆ.

ಕಂಬಳದ ಸಂಭ್ರಮದ ನಡುವೆ ಕೆಲವು ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. ಇಡೀ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ಕಲರವವೂ ಇರಲಿದೆ. ಮಿಂಚಿನ ಓಟದಲ್ಲಿ ಓಡಿ ಪ್ರಶಸ್ತಿ ಮುಡಿಗೇರಿಸಲು 200 ಜೋಡಿ ಕೋಣಗಳು ಸಜ್ಜಾಗಿರಲಿವೆ. ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಫನ್ ವರ್ಲ್ಡ್‌ ಕಡೆಯಿಂದ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ಇರಲಿದೆ. ಮುಖ್ಯವಾಗಿ ಪ್ರವೇಶ ಉಚಿತವಾಗಿರಲಿದೆ. ಯಾವುದೇ ಟಿಕೆಟ್‌ ಇಲ್ಲದೆ ಉಚಿತವಾಗಿ ಪ್ರವೇಶ ಮಾಡಬಹುದು. ಸಾರ್ವಜನಿಕರು ಯಾವುದೇ ಪಾಸ್‌ ತೋರಿಸುವ ಅಗತ್ಯವೂ ಇಲ್ಲ. ಆದರೆ ವಿಐಪಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಬಳವನ್ನು ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು.

ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ. ಕೋಣಗಳಿಗೆ ಆಹಾರ ಮತ್ತು ಕುಡಿಯುವ ನೀರು ಕಲ್ಪಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಕೋಣಗಳ ಆರೋಗ್ಯ ದೃಷ್ಟಿಯಿಂದ ಬೈಹುಲ್ಲು, ನೀರನ್ನು ಕೂಡ ಕರಾವಳಿಯಿಂದಲೇ ತರಿಸಲಾಗಿದೆ. ಕಂಬಳದ ಸ್ಥಳಕ್ಕೆ ಪಶುವೈದ್ಯರು, ನಾಟಿ ವೈದ್ಯರೂ ಸಹ ಸ್ಥಳದಲ್ಲಿದ್ದಾರೆ. ಗೆದ್ದ ಕೋಣಗಳಿಗೆ ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು, 2ನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು, 3ನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.

ಸಿಲಿಕಾನ್‌ ಸಿಟಿ ಜನರಿಗೆ ಕಂಬಳದ ಜೊತೆಗೆ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳುವ ಅವಕಾಶವೂ ಸಿಕ್ಕಿದೆ. ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದ್ದು, ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ, ಜನಪದ ಕುಣಿತ ಕಂಗೀಲು,ಮಾಂಕಾಳಿ ಕುಣಿತ ಸೇರಿದಂತೆ ಅಪರೂಪದ ಕುಣಿತಗಳೂ ಇರಲಿವೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section